ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ.

ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ.
Published on

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಗುತ್ತಿನಕೆರೆ ಶ್ರೀರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಗ್ರಾಮದ ತಿಮ್ಮಪ್ಪ ಸ್ವಾಮಿ, ಹಾರನಹಳ್ಳಿ ಕೋಡಮ್ಮ ದೇವಿ, ಯಳವಾರೆ ಹುಚ್ಚಮ್ಮದೇವಿ ಹಾಗೂ ಸುತ್ತಮುತ್ತಲಿನ ಗ್ರಾಮ ದೇವತೆಗಳ ಸಮ್ಮುಖದಲ್ಲಿ ವೈಭವದೊಂದಿಗೆ ರಂಗನಾಥಸ್ವಾಮಿ ಉತ್ಸವ ಮೂರ್ತಿಯ ಉತ್ಸವವು ದೇವಾಲಯದ ಆವರಣದಲ್ಲಿ ನಡೆಯಿತು.

ನಂತರ ಶ್ರೀದೇವಿ ಭೂದೇವಿ ಸಮೇತನಾದ ರಂಗನಾಥಸ್ವಾಮಿಯು ರಥಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದ್ದಂತೆ ಭಕ್ತರು ಗೋವಿಂದನ ನಾಮಸ್ಮರಣೆಯೊಂದಿಗೆ ರಥ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥಮಂಟಪದ ಮುಂದೆ ಹರಕೆ ಹೊತ್ತಿದ್ದ ಭಕ್ತರು ಕರ್ಪೂರ ಹಚ್ಚುವ ಮೂಲಕ ಹರಕೆ ತೀರಿಸಿದರೆ ರಂಗನಾಥ ಸ್ವಾಮಿಯ ಮೂಲ ವಿಗ್ರಹಕ್ಕೆ ಮಾಡಲಾಗಿದ್ದ ತೋಮಾಲೆ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತಿತ್ತು. ಹೆಬ್ಬಾರನಹಳ್ಳಿ, ಹಬ್ಬನಘಟ್ಟ, ಕನಕಂಚೇನಹಳ್ಳಿ, ಕೋಡಿಮಠ, ದೊಡ್ಡೇನಹಳ್ಳಿ,ಹಾರನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮಂಗಳವಾರ ಮಧ್ಯಾಹ್ನ ರಂಗನಾಥಸ್ವಾಮಿಯ ದೊಡ್ಡ ರಥೋತ್ಸವವು ಜರುಗಲಿದ್ದು ದೇವಾಲಯ ಅಭಿವೃದ್ಧಿ ಸಮಿತಿ ಅಗತ್ಯ ವ್ಯವಸ್ಥೆ ಜತೆಗೆ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net