ರಂಗನಾಥಪುರ ಕೆರೆ ಏರಿಯ ಮಣ್ಣು ಕುಸಿತ

22 CRO 02
ಚನ್ನರಾಯಪಟ್ಟಣ ತಾಲೂಕು ರಂಗನಾಥಪುರ ಗ್ರಾಮದ ಕೆರೆ ಏರಿಯ ಮಣ್ಣು ಕುಸಿದಿರುವುದು.
Published on

ಚನ್ನರಾಯಪಟ್ಟಣ: ತಾಲೂಕಿನ ಜಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥಪುರ ಗ್ರಾಮದ ಕೆರೆ ಏರಿಯ ಒಂದು ಭಾಗದ ಮಣ್ಣು ಕುಸಿದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಳೆದ 25 ವರ್ಷಗಳಿಂದ ನೀರಿಲ್ಲದೆ ಭಣಗುಡುತ್ತಿದ್ದ ಕೆರೆಯು ಈ ಬಾರಿ ಮೈದುಂಬಿ ಹರಿಯುತ್ತಿದೆ. ಈ ಕೆರೆಗೆ ಮಳೆ ನೀರು ಹರಿದು ಬರುವುದು ಕಡಿಮೆ. ಆದರೆ ಮಳೆಗಿಂತ ವ್ಯಾಪ್ತಿಯ ಒಂದೆರೆಡು ಕೊಳವೆ ಬಾವಿಗಳ ಕೇಸಿಂಗ್ ಪೈಪ್ ಮೇಲೆ ಉಕ್ಕಿಹರಿದ ನೀರಿನಿಂದಲೇ ತುಂಬಿರುವುದು ವಿಶೇಷವಾಗಿದೆ.

ಆದರೆ ಕಳೆದ ವಾರ ಕೆರೆ ಏರಿಯ ಮಧ್ಯಭಾಗದಲ್ಲಿ ಇದ್ದಕ್ಕಿದ್ದಂತೆಯೇ ಮಣ್ಣು ಕುಸಿದಿದ್ದು ಅಂದಿನಿಂದ ಮಳೆ ಸುರಿದಂತೆಲ್ಲ ಸ್ವಲ್ಪ ಸ್ವಲ್ಪವೇ ಮಣ್ಣು ಜರಿಯುತ್ತಿದೆ. ಜತೆಗೆ ಆ ಭಾಗದಲ್ಲಿ ಏರಿ ಬಿರುಕು ಬಿಟ್ಟಿದೆ.

ಕಳೆದ ಒಂದೂವರೆ ತಿಂಗಳ ಹಿಂದೆಯೇ ಕೆರೆ ತುಂಬಿ ಕೋಡಿ ಬಿದ್ದಿದ್ದು ಶಾಸಕ ಸಿ.ಎನ್.ಬಾಲಕೃಷ್ಣ ಗಂಗೆಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ್ದರು. ಅಂದಿನಿಂದಲೂ ಕೆರೆಯ ಕೋಡಿಯಲ್ಲಿ ನೀರು ಹೊರ ಹರಿಯುತ್ತಲೇ ಇದೆ. ಜತೆಗೆ ಮಳೆ ಸುರಿದಂತೆಲ್ಲ ನೀರು ಹರಿಯುವ ಪ್ರಮಾಣ ಹೆಚ್ಚುತ್ತಿದೆ.

ಇದರಿಂದ ಏರಿಗೆ ಒತ್ತಡ ಹೆಚ್ಚಾಗಿ ಈಗಾಗಲೇ ಕುಸಿದಿರುವ ಜಾಗದಲ್ಲಿ ಅಪಾಯವಾಗುವ ಸಾಧ್ಯತೆ ಇದೆ. ಇದರಿಂದಾಗಿ ಕೆರೆ ಏರಿಯ ಮೇಲೆ ಜಾನುವಾರು ಮೇಯಿಸಲು ಹಾಗೂ ತಿರುಗಾಡಲು ಭಯವಾಗುತ್ತಿದೆ ಎಂದು ಗ್ರಾಮದ ಶಂಕರ್ ಆತಂಕ ವ್ಯಕ್ತಪಡಿಸಿದರು.

ಕಳೆದ 3-4 ವರ್ಷಗಳ ಹಿಂದೆ ಕೆರೆ ಏರಿಯ ಮೇಲೆ ಸಾಗಿರುವ ಲಕ್ಷ್ಮೀಪುರ ಗ್ರಾಮದ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಕಾಮಗಾರಿ ವೇಳೆ ಏರಿಯ ಮೇಲೆ ಸುರಿದ ಮಣ್ಣನ್ನು ಸರಿಯಾಗಿ ಭದ್ರಗೊಳಿಸದೆ ಕಳಪೆ ಕಾಮಗಾರಿ ಮಾಡಿರುವುದೇ ಈ ರೀತಿ ಮಣ್ಣು ಕುಸಿಯಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಮಣ್ಣು ಕುಸಿದಿರುವ ಏರಿಯ ಭಾಗವನ್ನು ಪರಿಶೀಲಿಸಿ ದುರಸ್ತಿಗೊಳಿಸುವ ಮೂಲಕ ಕೆರೆಯನ್ನು ಸಂರಕ್ಷಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net