ರಂಗಧ್ವನಿ ನಾಟಕೋತ್ಸವ 15ರಿಂದ

11 vikram 3
Published on

ಧಾರವಾಡ: ರಂಗಾಯಣದ ವತಿಯಿಂದ ಮಾ. 15ರಿಂದ 19ರವರೆಗೆ ರಂಗಧ್ವನಿ ರಾಷ್ಟ್ರೀಯ ನಾಟಕೋತ್ಸವ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 15ರಂದು 10.30ಕ್ಕೆ ವಿಚಾರ ಸಂಕಿರಣವನ್ನು ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಉದ್ಘಾಟಿಸುವರು. ಅತಿಥಿಗಳಾಗಿ ಡಾ. ಬಿ.ಆರ್. ಪೊಲೀಸ್​ಪಾಟೀಲ, ಶ್ರೀಧರ ಹೆಗಡೆ ಆಗಮಿಸುವರು. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12 ಗಂಟೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಿಲ್ಪವನ ಅನಾವರಣ ಗೊಳಿಸುವರು. ನಂತರ ರಂಗಭೂಮಿಯಲ್ಲಿ ಭಾರತೀಯತೆ ಕುರಿತು ಗೋಷ್ಠಿ ನಡೆಯಲಿದೆ. ಸಂಜೆ 4 ಗಂಟೆಗೆ ಜಾನಪದ ಕಾರ್ಯಕ್ರಮ ನಡೆಯಲಿದ್ದು, ಡಾ. ಪಾಂಡುರಂಗ ಪಾಟೀಲ ಉದ್ಘಾಟಿಸುವರು ಎಂದರು.

ಸಂಜೆ 6 ಗಂಟೆಗೆ ನಾಟಕೋತ್ಸವಕ್ಕೆ ಸಚಿವ ಸಿ.ಟಿ. ರವಿ ಚಾಲನೆ ನೀಡುವರು. ಅತಿಥಿಗಳಾಗಿ ಸಚಿವ ಜಗದೀಶ ಶೆಟ್ಟರ್, ಶಾಸಕ ಅಮೃತ ದೇಸಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಟಿ.ಎಸ್. ನಾಗಾಭರಣ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಆರ್.ಆರ್. ಜನ್ನು, ಎಸ್. ರಂಗಪ್ಪ, ಪ್ರಕಾಶ ಹರಗಾಪುರ ಆಗಮಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ರವೀಂದ್ರನಾಥ ಟ್ಯಾಗೋರ ರಚನೆಯ ಡಾ. ಶ್ರೀಪಾದ ಭಟ್ ನಿರ್ದೇಶನದ ‘ಕೆಂಪು ಕಣಗಿಲೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಒಟ್ಟು ನಾಲ್ಕು ವೇದಿಕೆಗಳನ್ನು ನಿರ್ವಿುಸಲಾಗಿದೆ. ನಿತ್ಯ ಮಧ್ಯಾಹ್ನ 4.30ರಿಂದ ಜಾನಪದ ಕಲಾ ಪ್ರದರ್ಶನ ನಡೆಯಲಿದೆ ಎಂದರು.

ಮಾ. 16ರಂದು ಸಂಜೆ 7.30ಕ್ಕೆ ಭೂಪಾಲ್​ನ ಏಕರಂಗ ಥಿಯೇಟರ್ ಸೊಸೈಟಿ ತಂಡದಿಂದ ‘ನಟ ಸಾಮ್ರಾಟ’, ಮಾ. 17ರಂದು ಸಂಜೆ 7.30ಕ್ಕೆ ಬರೇಲಿಯ ದಯಾದೃಷ್ಟಿ ರಂಗವಿನಾಯಕ ರಂಗಮಂಡಳ ಸದಸ್ಯರಿಂದ ‘ಪಾರ್ಕ್’ (ಹಿಂದಿ), ರಾತ್ರಿ 8.30ಕ್ಕೆ ಅರ್ಣವ

ಆರ್ಟ್ಸ್ ಟ್ರಸ್ಟ್​ನಿಂದ ‘ಟು ಕಿಲ್ ಆರ್ ನಾಟ್ ಟು ಕಿಲ್’, ಮಾ. 18ರಂದು ಸಂಜೆ 7.30ಕ್ಕೆ ನವದೆಹಲಿಯ ರಂಗ ವಿಶಾರದ ಥಿಯೇಟರ್ ಕ್ಲಬ್ ಸದಸ್ಯರಿಂದ ‘ಬೂಡೆ ನೇ ಕಹಾ’ (ಹಿಂದಿ) ಹಾಗೂ ಮಾ. 19ರಂದು ರಾತ್ರಿ 8 ಗಂಟೆಗೆ ಬೆಂಗಳೂರಿನ ದೃಶ್ಯ ತಂಡದ ಸದಸ್ಯರಿಂದ ‘ವಿದಿಶೆಯ ವಿದೂಷಕ’ ನಾಟಕ ಪ್ರದರ್ಶನಗೊಳ್ಳಲಿವೆ ಎಂದರು. ಮಾ. 19ರಂದು ಸಂಜೆ 6 ಗಂಟೆಗೆ ಸಮಾರೋಪ ನಡೆಯಲಿದ್ದು, ಅತಿಥಿಗಳಾಗಿ ರಂಗತಜ್ಞ ಸುಚೇಂದ್ರ ಪ್ರಸಾದ, ನಟ ಮಂಡ್ಯ ರಮೇಶ, ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಮಹೇಶ ಟೆಂಗಿನಕಾಯಿ, ಭೀಮಸೇನ ಆರ್, ಪ್ರಭುದೇವ ಕಪ್ಪಗಲ್ಲು ಆಗಮಿಸುವರು. ಆಕಾಶವಾಣಿ ಉದ್ಘೋಷಕ ಡಾ. ಶಶಿಧರ ನರೇಂದ್ರ ಸಮಾರೋಪ ನುಡಿಗಳನ್ನು ಆಡಲಿದ್ದಾರೆ ಎಂದರು.

ರಾಜೀನಾಮೆಗೆ ರಂಗಶಿಸ್ತು ಆದೇಶ ಕಾರಣ: ಧಾರವಾಡ ರಂಗಾಯಣದಿಂದ ನಡೆಯುವ ರಂಗ ಚಟುವಟಿಕೆಗಳಿಂದ ರಂಗ ಸಮಾಜದ ಸದಸ್ಯರು ಹಾಗೂ ರೆಪರ್ಟರಿ ಕಲಾವಿದರನ್ನು ಹೊರಗಿಟ್ಟಿಲ್ಲ. ಎಲ್ಲರನ್ನೂ ಆಹ್ವಾನಿಸಲಾಗಿದೆ. ರೆಪರ್ಟರಿ ಕಲಾವಿದರಿಗೆ ರಂಗಶಿಸ್ತು ಪಾಲಿಸುವಂತೆ ಸೂಚಿಸಿರುವುದೇ ಅವರ ರಾಜೀನಾಮೆಗೆ ಕಾರಣ ಎಂದು ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾವಿದರ ಬಗ್ಗೆ ಯಾವುದೇ ಅಸಮಾಧಾನ ಹೊಂದಿಲ್ಲ. ಅಧಿಕಾರ ವಹಿಸಿಕೊಂಡ 3 ತಿಂಗಳ ಅವಧಿಯಲ್ಲಿ 10 ಬಾರಿ ಕಲಾವಿದರ ಹಾಗೂ ಸಿಬ್ಬಂದಿ ಸಭೆ ನಡೆಸಿದ್ದೇನೆ. ಅವರೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿ ರಂಗಾಯಣ ಅಭಿವೃದ್ಧಿಗೆ ಸಲಹೆ ಸಹ ಕೇಳಿದ್ದೇನೆ. ಆದರೆ ಸರ್ಕಾರದಿಂದ ಸಂಭಾವನೆ ಪಡೆದು, ಸರಿಯಾಗಿ ಕೆಲಸ ಮಾಡಲಿ ಎಂಬ ದೃಷ್ಟಿಯಿಂದ ಕೆಲ ಬದಲಾವಣೆ ಮೂಲಕ ರಂಗ ಶಿಸ್ತು ಪಾಲಿಸುವಂತೆ ಆದೇಶಿಸಲಾಗಿತ್ತು. ಇದೇ ಕಾರಣದಿಂದ ಕಲಾವಿದರು ಇಲ್ಲ ಸಲ್ಲದ ಆರೋಪ ಮಾಡಿ ರಾಜೀನಾಮೆ ನೀಡಿದ್ದಾರೆ ಎಂದರು.

ಅವರ ರಾಜೀನಾಮೆ ನನಗೂ ಬೇಸರ ತಂದಿದೆ. ಎರಡ್ಮೂರು ದಿನಗಳ ಕಾಲ ಪರಿಶೀಲಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಹೇಳಲಾಗಿತ್ತು. ಆದರೆ, ಕಲಾವಿದರು ನೇರವಾಗಿ ರಂಗ ಸಮಾಜದ ಅಧ್ಯಕ್ಷರೂ ಆಗಿರುವ ಸಚಿವ ಸಿ.ಟಿ. ರವಿ ಅವರಿಗೆ ಪತ್ರ ಸಲ್ಲಿಸಿದ್ದಾರೆ. ಇದೀಗ ಸಚಿವರೇ ನಿರ್ಣಯ ಕೈಗೊಳ್ಳಲಿದ್ದು, ಅದರಂತೆ ಮುನ್ನಡೆಯಲಾಗುವುದು ಎಂದರು.

ರಂಗಾಯಣವನ್ನು ಮೈಸೂರು ರಂಗಾಯಣ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ಧವಾಗಿದೆ. ಅದರಂತೆ ಸಾಂಸ್ಕೃತಿಕ ಸಮುಚ್ಚಯ ಭವನದ ಆಧುನೀಕರಣ ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಉತ್ಸವಗಳನ್ನು ನಡೆಸಲು ಚಿಂತಿಸಲಾಗಿದೆ. ಸೂಕ್ತ ಮೂಲ ಸೌಕರ್ಯ, ಸ್ವಂತ ಜಾಗ ನೀಡುವಂತೆ ಮುಖ್ಯಮಂತ್ರಿ ಹಾಗೂ ಸಚಿವ ಸಿ.ಟಿ. ರವಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರಂಗಾಯಣಕ್ಕೆ 10 ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೆಲ ಕಾರಣಗಳಿಂದ ಸರ್ಕಾರದ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ ಸೂಕ್ತ ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು.

ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ, ಮಾರ್ತಂಡಪ್ಪ ಕತ್ತಿ, ಸಿದ್ದರಾಮ ಹಿಪ್ಪರಗಿ, ಕೆ.ಎಚ್. ನಾಯಕ, ಅರವಿಂದ ಕುಲಕರ್ಣಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಪರ್ದಿಯಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ ರಂಗಾಯಣದ ಸ್ವತ್ತಾಗಲಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆದಿದೆ. ಶೇ. 99ರಷ್ಟು ಒಪ್ಪಿಗೆ ನೀಡಿದಂತಾಗಿದೆ. ಇನ್ನು ಕೆಲ ದಿನಗಳಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳಲಿದೆ. | ರಮೇಶ ಪರವಿನಾಯ್ಕರ ರಂಗಾಯಣ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net