ರಂಗಗೀತೆಗಳ ಮೂಲಕ ಸಾಧಕರ ಸ್ಮರಣೆ

7
Published on

ಮೈಸೂರು: ರಂಗಭೂಮಿಯಲ್ಲಿ ಸೇವೆ ಸಲ್ಲಿಸಿ ಮರೆಯಾದ 16 ರಂಗಸಾಧಕರಿಗೆ ರಂಗಗೀತೆಗಳ ಮೂಲಕ ನಮನ ಸಲ್ಲಿಸಿ ಸ್ಮರಿಸಲಾಯಿತು.
ಬೆಂಗಳೂರಿನ ರಂಗರತ್ನಾಕರ ಸಂಸ್ಥೆ ವತಿಯಿಂದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ರಂಗಗೀತೆಗಳ ಗಾಯನ, ರಂಗದೃಶ್ಯಗಳ ಮತ್ತು ನಾಟಕದ ಪ್ರದರ್ಶನ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.
ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ರಂಗನಾಯಕಮ್ಮ, ಬಿ.ಜಿ. ರಾವ್, ಕಲಾರತ್ನ ಬಸವರಾಜ್, ಶ್ರೀಕಂಠಗುಂಡಪ್ಪ, ಡಿ.ವಿ.ಚನ್ನಬಸಪ್ಪ, ಎಸ್.ಎಸ್. ಗಾಯತ್ರಿ, ಜಿ.ಆರ್. ರಾಮಚಂದ್ರ, ಸಾಗರೆ ವೆಂಕಟಪ್ಪ, ಎಂ. ನಾಗರಾಜ (ಡಿಕ್ಕಿ), ಬಿ.ಜಿ. ವಾಸದೇವನ್, ತಬಲ ಮಹದೇವಣ್ಣ, ತಬಲ ರಾಮಕೃಷ್ಣ, ರಂಗವಾಣಿ ಮಹದೇವ್, ರಂಗಪ್ರಗತಿ ಮಹದೇವ್, ರಾಧಾಮೂರ್ತಿ, ಮೋಹನ್ ದಾಸ್ ಅವರನ್ನು ನೆನಪು ಮಾಡಿಕೊಳ್ಳಲಾಯಿತು.
ಇವರು ಸಾಧನೆ, ನಟನೆ, ಸೇವೆಯ ಕುರಿತು ಸಹ ಕಲಾವಿದರು ಮೆಲುಕು ಹಾಕಿದರು. ಈ ಮಹನೀಯರ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಮೈಸೂರು ವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಕೆ.ಟಿ. ವೀರಪ್ಪ ಮಾತನಾಡಿ, ಪೌರಾಣಿಕ, ಸಾಮಾಜಿಕ ನಾಟಕದಲ್ಲಿ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಅವರಲ್ಲಿ ಕೆಲವರು ಗತಿಸಿ ಹೋಗಿದ್ದು, ಅವರ ನಟನೆ, ಪಾತ್ರಗಳಲ್ಲಿನ ಅಭಿರುಚಿ, ಸೇವೆಯನ್ನು ಈಗಿನ ಕಾಲದಲ್ಲಿ ಸ್ಮರಿಸಿಕೊಳ್ಳಲಾಗುತ್ತಿಲ್ಲ, ಇದು ಸರಿಯಲ್ಲ ಎಂದರು.
ಸಂಸ್ಥೆ ಕಾರ್ಯದರ್ಶಿ ಎಚ್.ಎಸ್. ಗೋವಿಂದಗೌಡ ಮಾತನಾಡಿ, ರಂಗಭೂಮಿಯ ಸೇವೆಯನ್ನು ದಾಖಲೀಕರಣ ಮಾಡಲಾಗುತ್ತಿದ್ದು, ರಂಗಗೀತೆಗಳ ಸಿಡಿ ಹೊರತರಲಾಗಿದೆ. ಇದರೊಂದಿಗೆ ಹಸ್ತಪ್ರತಿಯಲ್ಲಿರುವ ನಾಟಕವನ್ನು ಕೃತಿ ರೂಪದಲ್ಲಿ ಪ್ರಕಟಿಸಲಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವೈ.ಡಿ. ರಾಜಣ್ಣ ಮಾತನಾಡಿ, ರಂಗಭೂಮಿ ಉದ್ದೇಶವೇ ಸತ್ಯ ಶೋಧನೆಯಾಗಿದೆ. ಬದುಕಿನ ವಿವಿಧ ಮಜಲುಗಳನ್ನು ರಂಗಮಂಚದ ಮೇಲೆ ತೆರೆದಿಡುವ ಕೆಲಸವನ್ನು ನಾಟಕ ಮಾಡಲಿದೆ ಎಂದರು.
ಕಲೆಗಳ ಪ್ರದರ್ಶನ ಸಂತೋಷದ ಆಚೆ ಸಂದೇಶವನ್ನು ಕೊಡುವಂತಿರಬೇಕು. ಕೇವಲ ಮನರಂಜನೆಗೆ ಸೀಮಿತವಾಗಬಾರದು. ಅದರಾಚೆಗೆ ಮನಸ್ಸನ್ನು ವಿಕಾಸಗೊಳಿಸಬೇಕು ಎಂದರು.
ಜಿಲ್ಲಾ ಕಲಾವಿದರ ಕೇಂದ್ರ ಸಮಿತಿ ಅಧ್ಯಕ್ಷ ಮೈ.ಮ.ನಾಗರಾಜ್, ಸಂಸ್ಥೆ ಅಧ್ಯಕ್ಷ ಕಿರಗಸೂರು ರಾಜಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net