ರಂಗ ವಿನ್ಯಾಸವೆಂದರೆ ಅಲಂಕಾರವಲ್ಲ

25 YERRISWAMY 03
Published on

ಬಳ್ಳಾರ: ರಂಗ ವಿನ್ಯಾಸವೆಂದರೆ ಕೇವಲ ಅಲಂಕಾರವಲ್ಲ. ಅದೊಂದು ನಾಟಕದ ವಸ್ತು, ಪಾತ್ರ, ಸ್ಥಳ ಮತ್ತು ಸನ್ನಿವೇಶಗಳ ಆಧಾರಿತ ವಿನ್ಯಾಸವಾಗಿದೆ ಎಂದು ವಿಎಸ್‌ಕೆ ವಿವಿಯ ಪ್ರದರ್ಶನ ಕಲೆ ನಾಟಕ ವಿಭಾಗದ ಉಪನ್ಯಾಸಕಿ ಡಾ.ಸಹನಾ ಪಿಂಜಾರ್ ಹೇಳಿದರು.
ಇಲ್ಲಿನ ಎಸ್‌ಎಸ್‌ಎ ಕಾಲೇಜಿನಲ್ಲಿ ನಾಟಕ ವಿಭಾಗದ ವತಿಯಿಂದ ಗುರುವಾರ ನಡೆದ ಸಮಕಾಲೀನ ಕನ್ನಡ ರಂಗಭೂಮಿಯಲ್ಲಿ ರಂಗ ವಿನ್ಯಾಸ ಎನ್ನುವ ವಿಷಯದ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು. ರಂಗಭೂಮಿಯಲ್ಲಿ ಪರದೆ , ಬೆಳಕು, ವಸ್ತ್ರ, ಸಂಗೀತ, ಬಣ್ಣ ಇವೆಲ್ಲವೂ ರಂಗ ವಿನ್ಯಾಸದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ . ರಂಗ ಪಠ್ಯವನ್ನು ಸಮಕಾಲೀನಗೊಳಿಸಿ ಪ್ರೇಕ್ಷಕರಿಗೆ ದಾಟಿಸುವುದು ಕೂಡ ವಿನ್ಯಾಸ. ಪ್ರಧಾನವಾಗಿ ರೋಗಗ್ರಸ್ತ ಸಮಾಜದ ಹಿಂಸೆ, ತೊಳಲಾಟವನ್ನು ಸಾಂಕೇತಿಕವಾಗಿ ವಿನ್ಯಾಸ ಮಾಡಿ ತೋರಿಸುವ ಜಾಣ್ಮೆ ಸಮರ್ಥ ನಿರ್ದೇಶಕನದಾಗಿರಬೇಕು ಎಂದು ಸಲಹೆ ನೀಡಿದರು. ನಾಡಿನ ಕೆಲವು ರಂಗಮಂದಿರಗಳಲ್ಲಿ ಹೊಸ ಪ್ರಯೋಗಗಳು ರಂಗ ವಿನ್ಯಾಸದ ಸ್ವರೂಪವನ್ನು ಬದಲಾಯಿಸಿಕೊಂಡು ಸಮಕಾಲೀನ ಕನ್ನಡ ರಂಗಭೂಮಿಯ ಹೊಸ ಆಲೋಚನೆಗಳೊಂದಿಗೆ ಮುನ್ನಡೆಯುತ್ತಿರುವುದು ಆಶಾದಾಯಕವಾದ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.
ರಂಗ ನಿರ್ದೇಶಕ ರಿಯಾಜ್ ಸಿಹಿಮೊಗೆ ಮಾತನಾಡಿ, ರಂಗಭೂಮಿ ನಿಂತ ನೀರಲ್ಲ ಚಲಿಸುವ ನೀರು. ಸಮಕಾಲೀನತೆಗೆ ಅದು ಇನ್ನಷ್ಟು ತೆರೆದುಕೊಳ್ಳಲು ಕಲಾವಿದರ ಬದ್ಧತೆ, ಪ್ರೇಕ್ಷಕರ ಪ್ರೋತ್ಸಾಹ ಬಹಳ ಮುಖ್ಯ. ನಾಟಕಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ, ತಲುಪಿಸುವ ಕೆಲಸವಾಗಬೇಕು. ಪ್ರೇಕ್ಷಕ ಮತ್ತು ನಾಟಕಾರನ ನಡುವೆ ಇರುವ ಬಿಕ್ಕಟ್ಟುಗಳನ್ನು ಬಿಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net