ಯೋಧರಿಗಾಗಿ ವಿಶೇಷ ಮಂಡಲ ಪೂಜೆ

parthasarathi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿಯವರು ಸಂಸ್ಥಾಪಿಸಿರುವ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್​ನ ಹುಬ್ಬಳ್ಳಿ ವಿಭಾಗದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ದೇಶಪಾಂಡೆನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜು. 27ರಂದು ಶ್ರೀಮತ್ ಭಾಗವತ ಸಮ್ಮೇಳನ ಹಾಗೂ ದೇಶದ ಯೋಧರ ರಕ್ಷಣೆಗಾಗಿ ವಿಶೇಷ ಭದ್ರಕ ಮಂಡಲ ಪೂಜೆಯನ್ನು ಆಯೋಜಿಸಲಾಗಿದೆ.

ಬೆಳಗ್ಗೆ 7ರಿಂದ 9 ಗಂಟೆಯವರೆಗೆ ನಡೆಯುವ ಮಂಡಲ ಪೂಜೆಗೆ 108 ಭಕ್ತರು ಅರ್ಚನೆ ಸಂಕಲ್ಪ ಮಾಡಿರುತ್ತಾರೆ. ಪಂ. ಅಕ್ಷಯ ಉಡುಪ ಆಚಾರ್ಯರು ನೇತೃತ್ವ ವಹಿಸುವರು. 9.30ರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.

ನಂತರ 10ಗಂಟೆಗೆ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಂ. ಡಾ. ಸತ್ಯಮೂರ್ತಿ ಆಚಾರ್ಯರು ಭಾಗವತ ಪ್ರವಚನ ನೀಡಲಿದ್ದಾರೆ. ಆಧ್ಯಾತ್ಮಿಕ ಸಾಧಕ ಪ್ರಶಸ್ತಿ ಪುರಸ್ಕೃತ ಕಂಠಪಲ್ಲಿ ಡಾ. ಸಮೀರಣಾಚಾರ್ಯ ಅವರಿಗೆ ಭಾಗವತ ಧರ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 13ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಮೈಸೂರಿನ ಡಾ. ಪೃಥ್ವಿ ಅದ್ವೈತ ಎಂಬ ಬಾಲಕನಿಗೆ ವಾಮನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ್, ಬೆಂಗಳೂರಿನ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಅಧ್ಯಕ್ಷ ಕ್ಯಾಪ್ಟನ್ ಮಣಿ, ನಿರ್ದೇಶಕಿ ಮಂಗಳಾ ಭಾಸ್ಕರ್, ಕಾರ್ಯದರ್ಶಿ ಭಾನುಪ್ರಕಾಶ್, ಮೈಸೂರು ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಅಧ್ಯಕ್ಷ ಡಾ. ರಮಾಕಾಂತ್ ಶೆಣೈ, ಇತರರು ಭಾಗವಹಿಸುವರು.

ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಯವರು ಸಂಕಲನ ಮಾಡಿರುವ ಶ್ರೀಮತ್ ಭಾಗವತದ ಆಂಗ್ಲ ಗ್ರಂಥವನ್ನೂ ಲೋಕಾರ್ಪಣೆ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಬೇಕಾಗಿ ಫೆಡರೇಷನ್​ನ ಹುಬ್ಬಳ್ಳಿ ವಿಭಾಗದ ಕಾರ್ಯದರ್ಶಿ ಅಚ್ಯುತ್ ಭಟ್ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net