

ಚಿತ್ರದುರ್ಗ: ಕೆರೆಯೊಂದರ ಮಧ್ಯದಲ್ಲಿ ಪ್ರವಾಹಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ವ್ಯಕ್ತಿಯೊಬ್ಬರ ಕೈ ಮಾತ್ರ ಕಾಣುತ್ತಿತ್ತು. ಸುತ್ತಲೂ ಕಿಕ್ಕಿರಿದು ಸೇರಿದ್ದ ಜನ, ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿ ಸಮೂಹದ ಗಮನವೂ ಅತ್ತ ನೆಟ್ಟಿತ್ತು. ಇವರೆಲ್ಲರೂ ಸುತ್ತ ನಿಂತು ಏನು ನೋಡುತ್ತಿದ್ದಾರೆಂದು ಇಣುಕಿ ನೋಡಿದರೆ, ಹತ್ತಾರು ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು…!
ಐತಿಹಾಸಿಕ ಚಂದ್ರವಳ್ಳಿ ಕೆರೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಅಗ್ನಿಶಾಮಕದಳದಿಂದ ಬುಧವಾರ ಹಮ್ಮಿಕೊಂಡಿದ್ದ ‘ಪ್ರವಾಹ ರಕ್ಷಣೆ’ ಕುರಿತ ಕಲ್ಪಿತ ಕಾರ್ಯಾಚರಣೆ ವೇಳೆ ಕಂಡುಬಂದ ದೃಶ್ಯ.
ಪ್ರವಾಹದ ವೇಳೆ ನದಿ-ಕೆರೆ-ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿ ಕೊಚ್ಚಿ ಹೋಗುವ, ಮುಳುಗುವ ಸ್ಥಿತಿಯಲ್ಲಿದ್ದ ವ್ಯಕ್ತಿಗಳನ್ನು ಯಾವ ರೀತಿ ರಕ್ಷಿಸಬೇಕು. ಅದಕ್ಕಾಗಿ ಅನುಸರಿಸುವ ಕ್ರಮಗಳ್ಯಾವುವು ಎಂಬುದನ್ನು ಕಣ್ಣಾರೆ ನೋಡುವ ಅವಕಾಶ ಅನೇಕ ನಾಗರಿಕರಿಗೆ ಇದೇ ವೇಳೆ ಸಿಕ್ಕಿತಲ್ಲದೆ, ಆಂಧ್ರಪ್ರದೇಶದ ವಿಜಯವಾಡ ಕೇಂದ್ರಸ್ಥಾನದ ಎನ್‌ಡಿಆರ್‌ಎಫ್ 10ನೇ ಬೆಟಾಲಿಯಲ್ ಯೋಧರು ಕೈಗೊಂಡ ಕಲ್ಪಿತ ಕಾರ್ಯಾಚರಣೆ ನೆರೆದಿದ್ದವರ ಗಮನ ಸೆಳೆಯಿತು.
ಎನ್‌ಡಿಆರ್‌ಎಫ್‌ನ ಎರಡು ಹಾಗೂ ಜಿಲ್ಲಾ ಅಗ್ನಿಶಾಮಕ ದಳದ ಒಂದು ಬೋಟ್ ಬಳಸಿ ಕೆರೆಯಲ್ಲಿ ವಿವಿಧ ಬಗೆಯ ಕಾರ್ಯಾಚರಣೆ ನಡೆಸಲಾಯಿತು. ಸತತ 1 ತಾಸು ಅವಧಿಯ ಪ್ರದರ್ಶನದಲ್ಲಿ ಆಧುನಿಕ ವಿಪತ್ತು ಉಪಕರಣಗಳು ಹಾಗೂ ಸ್ಥಳೀಯವಾಗಿ ದೊರಕುವ ಬಾಟಲ್, ಒಣ ತೆಂಗಿನ ಕಾಯಿ ಸೇರಿ ಇತರೆ ವಸ್ತುಗಳನ್ನು ಬಳಸಿ ಜೀವ ರಕ್ಷಣೆ ಮಾಡಿಕೊಳ್ಳುವ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.
ಆಳವಾದ ನೀರಿನಲ್ಲಿ ಮುಳುಗಿದ ವ್ಯಕ್ತಿಯ ಸ್ಥಳದ ಪತ್ತೆ ಹಚ್ಚುವುದು, ಸಿಪಿಆರ್ ಮಾಡುವುದು, ಸ್ಕೂಪ್ ಡೈವಿಂಗ್ ಮೂಲಕ ರಕ್ಷಣೆ, ವ್ಯಕ್ತಿಯನ್ನು ನೀರಿನಿಂದ ಹೊರತರುವ ಕ್ರಮ, ತುರ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು, ತ್ವರಿತ ಮಾಹಿತಿ ವಿನಿಮಯ, ಸಮನ್ವಯತೆ ಸೇರಿ ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಮಾರ್ಗಸೂಚಿಯ ಹಲವು ವಿಧಾನಗಳನ್ನು ಪರಿಚಯಿಸಿದರು.
ಜಿಪಂ ಸಿಇಒ ಎಂ.ಎಸ್.ದಿವಾಕರ್, ಎಡಿಸಿ ಟಿ.ಜವರೇಗೌಡ, ಎಸಿ ಆರ್.ಚಂದ್ರಯ್ಯ, ಎಎಸ್‌ಪಿ ಎಚ್.ಜೆ.ಕುಮಾರಸ್ವಾಮಿ, ಡಿಎಚ್‌ಒ ಡಾ.ಆರ್.ರಂಗನಾಥ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪುಟ್ಟಸ್ವಾಮಿ, ನಗರಸಭೆ ಆಯುಕ್ತ ಶ್ರೀನಿವಾಸ, ಗ್ರೇಡ್ 2 ತಹಸೀಲ್ದಾರ್ ಫಾತೀಮಾ ಬಿಬಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಎಚ್.ಎನ್.ಸಮರ್ಥ ಇತರರಿದ್ದರು.
ಜೀವರಕ್ಷಣೆ ಕೌಶಲ ಅಗತ್ಯ
ವಿಪತ್ತು ಹಾಗೂ ತುರ್ತು ಸಂದರ್ಭದ ವೇಳೆ ಜೀವರಕ್ಷಣೆ ಕೌಶಲ ತಿಳಿದುಕೊಳ್ಳುವ ಅಗತ್ಯವಿದ್ದು, ಎಲ್ಲರೂ ಮುಂದಾಗಬೇಕು ಎಂದು ಡಿಸಿ ದಿವ್ಯಾಪ್ರಭು ಸಲಹೆ ನೀಡಿದರು. ಆಳವಾದ ನೀರಿನಲ್ಲಿ ಮುಳುಗಿದವರನ್ನು ಯಾವ ರೀತಿ ಮೇಲೆತ್ತಿ, ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ರವಾಸಬೇಕು ಎಂಬುದನ್ನು ಎನ್‌ಡಿಆರ್‌ಎಫ್ ತಂಡ ಕಲ್ಪಿತ ಕಾರ್ಯಾಚರಣೆ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವಂತೆ ತೋರಿಸಿಕೊಟ್ಟಿದೆ. ಇವೆಲ್ಲವೂ ನಿತ್ಯ ಜೀವನದ ಪಾಠವಿದ್ದಂತೆ ಎಂದರು.
ದುರಂತ ಸಂದರ್ಭ ರಕ್ಷಣೆ ಕಾರ್ಯ
ನೈಸರ್ಗಿಕ, ರಾಸಾಯನಿಕ, ಅಣು ವಿಪತ್ತು, ಕಟ್ಟಡ, ರೈಲು ದುರಂತ ಸೇರಿ ದೊಡ್ಡ ಅವಘಡಗಳು ಸಂಭವಿಸಿದ ವೇಳೆ ಕಾರ್ಯನಿರ್ವಹಿಸಿ ಜನರ ಪ್ರಾಣಗಳನ್ನು ರಕ್ಷಿಸುವ ಕೆಲಸ ಎನ್‌ಡಿಆರ್‌ಎಫ್ ಮಾಡುತ್ತ್ತಿದೆ ಎಂದು ಎನ್‌ಡಿಆರ್‌ಎಫ್ ತಂಡದ ಕಮಾಂಡರ್ ಹರಿಶ್ಚಂದ್ರ ಪಾಂಡೆ ಹೇಳಿದರು.
ಯಾವುದೇ ಮೂಲೆಯಲ್ಲಿ ಅವಘಡ ಸಂಭವಿಸಿದರೂ ತುರ್ತಾಗಿ ಸ್ಪಂದಿಸಲಾಗುತ್ತಿದೆ. ಅವಘಡಗಳು ಸಂಭವಿಸಿದ ವೇಳೆ ಅಗ್ನಿಶಾಮಕ, ತುರ್ತುಸೇವೆ, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಸಮುದಾಯದಲ್ಲಿ ತರಬೇತಿ ಹೊಂದಿದ ವ್ಯಕ್ತಿಗಳು ಮೊದಲು ಕಾರ್ಯನಿರತರಾಗುತ್ತಾರೆ ಎಂದರು.
ಇವರಿಗೆ ಸೂಕ್ತ ತರಬೇತಿ ಕಲ್ಪಿತ ಪ್ರದರ್ಶನದ ಮೂಲಕ ನೀಡಲಾಗುತ್ತಿದೆ. ಅಪಾಯಕ್ಕೆ ಸಿಲುಕಿದ ವ್ಯಕ್ತಿಯ ಜೀವ ಉಳಿಸುವುದು ಸವಾಲಿನ ಕೆಲಸವಾಗಿದೆ. ಇದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.