ಯೋಧರ ತ್ಯಾಗ ಬಲಿದಾನ ಸ್ಮರಣೀಯ

28 vikram 5
Published on

ಧಾರವಾಡ: ದೇಶ ಕಾಯುವ ಸೇವೆ ಈಶ ಸೇವೆ ಇದ್ದಂತೆ. ರಾಷ್ಟ್ರ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ವೈರಿಗಳೊಡನೆ ಹೋರಾಡುವ ಯೋಧರ ತ್ಯಾಗ ಬಲಿದಾನ ಸ್ಮರಣೀಯ ಎಂದು ನಿವೃತ್ತ ಯೋಧ ಮೇಜರ್ ಪರಮೇಶ್ವರಯ್ಯ ಎಚ್. ಆರ್. ಹೇಳಿದರು.
ನಗರದ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ, ಹುತಾತ್ಮ ಯೋಧರ ಸ್ಮರಣೆ ಹಾಗೂ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸೇನೆಯಾಗಿದ್ದು, ಯುವಕರು ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗಬೇಕು ಎಂದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಕ್ಲಾಸಿಕ್ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಯೋಧರಾದ ಬಸಪ್ಪ ಇಮ್ಮನ್ನವರ, ಸಾಯಿರಾಮ ಅಂಬಿಗೇರ, ಬಸಪ್ಪ ಸೊನ್ನದ, ಶ್ರೀರಾಮ ನಿಪ್ಪಾಣಿ ಅವರು ತಮ್ಮ ಸೇವೆಯ ಅನುಭವ ಹಂಚಿಕೊಂಡರು. ಯೋಧರನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕರಾದ ಶಿವಕುಮಾರ ಚವ್ಹಾಣ, ರಾವಸಾಬ್ ಪೂಜಾರ, ಸಂತೋಷ ಎಚ್. ಆರ್., ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ., ವ್ಯವಸ್ಥಾಪಕ ದೀಪಕ ಜೋಡಂಗಿ, ಇತರರು ಇದ್ದರು. ಸಂಯೋಜಕ ಬಸವರಾಜ ಕುಪ್ಪಸಗೌಡ್ರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net