

ನಿಪ್ಪಾಣಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಕರ್ತವ್ಯದ ವೇಳೆ ಸಾವನ್ನಪ್ಪಿದ ತಾಲೂಕಿನ ಕುರ್ಲಿ ಗ್ರಾಮದ ಯೋಧ ನವನಾಥ ದಿವಟೆ (30) ಅವರ ಅಂತ್ಯಸಂಸ್ಕಾರ ಸಕಲ ಗೌರವಗಳೊಂದಿಗೆ ಗ್ರಾಮದಲ್ಲಿ ಬುಧವಾರ ಜರುಗಿತು. ಅಂತಿಮ ಹಂತದ ಮತದಾನದ ಸಂದರ್ಭದಲ್ಲಿ ಕರ್ತವ್ಯನಿರತನಾಗಿದ್ದಾಗ ಸೋಮವಾರ ಬೆಳಗ್ಗೆ ಅಸ್ವಸ್ಥತೆ ಉಂಟಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದರು. ಉತ್ತರಪ್ರದೇಶದಿಂದ ಹೈದರಾಬಾದ್, ಪಣಜಿ ಮಾರ್ಗವಾಗಿ ಬೆಳಗಾವಿಗೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿಂದ ಸೇನಾಪಡೆ ವಾಹನದ ಮೂಲಕ ಕುರ್ಲಿ ಗ್ರಾಮಕ್ಕೆ ಬಂದ ಮೃತದೇಹ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮಾಜಿ ಸೈನಿಕರ ಸಂಘ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಬಸ್ ನಿಲ್ದಾಣದ ಬಳಿ ಕೆಲಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರ ಇಡಲಾಯಿತು. ನಂತರ ಗ್ರಾಮದ ಸ್ಮಶಾನಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಿತು. ಪೊಲೀಸ್ ಪಡೆ ಆಕಾಶದಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಗೌರವ ಸಲ್ಲಿಸಿತು. ಸಹೋದರ ರಾಜು ದಿವಟೆ ತಮ್ಮನ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಬೆಳಗಾವಿ, ವಿಜಯಪುರ ಸಿಐಪಿಎ್ ಅಧಿಕಾರಿಗಳು, ಸಿಬ್ಬಂದಿ, ಸಂಗಮೇಶ ಶಿವಯೋಗಿ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಅನಿಲ ಕುಂಬಾರ, ಗ್ರಾಪಂ ಅಧ್ಯಕ್ಷ ಅನಿಲ ಕಾಂಬಳೆ, ಮಾಜಿ ಅಧ್ಯಕ್ಷ ಅಮರ ಶಿಂತ್ರೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.