ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಿ: ಸಚಿವ ಚಲುವರಾಯಸ್ವಾಮಿ

ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಸಂಸ್ಥೆಯ  ವಿರುದ್ಧ ಎಫ್‌ಐಆರ್ ದಾಖಲಿಸಿ: ಸಚಿವ ಚಲುವರಾಯಸ್ವಾಮಿ
Published on

ಹಾಸನ:  ಕೃಷಿ ಯಂತ್ರಧಾರೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಸಂಸ್ಥೆಯ ಪರವಾನಗಿಯನ್ನು ಕೂಡಲೇ ರದ್ದುಪಡಿಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರೈತರಿಗೆ ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ಯೋಜನೆ ಜಾರಿಗೆ ಬಂದಿದೆ. ಆದರೆ ಬೇಕಾಬಿಟ್ಟಿ ಕೆಲಸ ಮಾಡುವುದಾದರೆ ಅಂತವರಿಗೆ ಅನುಕೂಲ ಮಾಡಿಕೊಡುವುದು ಏಕೆ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಸುಲೋಚನಾ ಅವರನ್ನು ಪ್ರಶ್ನಿಸಿದರು.

ರೈತರಿಂದ ಯಾವ ದೂರುಗಳು ಬರದಂತೆ ಕೃಷಿ ಅಧಿಕಾರಿಗಳು ಕೆಲಸ ಮಾಡಬೇಕು. ನಕಲಿ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಜಾಗೃತ ತಂಡದ ಸದಸ್ಯರು ನಿರಂತರ ದಾಳಿ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು. ರಸಗೊಬ್ಬರ, ಬಿತ್ತನೆ ಬೀಜಕ್ಕೆ ಅಭಾವ ಸೃಷ್ಟಿಯಾಗದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕೃಷಿ ಯಂತ್ರಧಾರೆ ಸಮರ್ಪಕವಾಗಿ ಜಾರಿಯಾಗದ ಹಿನ್ನಲೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಕೃಷಿ ಚಟುವಟಿಕೆಯ ಸಾಮಗ್ರ ಒದಗಿಸುವುದು ಸರ್ಕಾರ, ಡಿಸೇಲ್ ಹಾಕಿಸುವುದೇ ಸರ್ಕಾರವೇ. ಆದರೆ ಅದರ ಪ್ರಯೋಜನ ಮಾತ್ರ ಬೇರೆ ಯಾರಿಗೋ ಆಗುತ್ತಿದೆ. ಗಂಡಸಿಯಲ್ಲಿ ಯಂತ್ರಧಾರೆ ಕಚೇರಿಯೇ ಬಾಗಿಲು ಹಾಕಿದೆ. ಖಾಸಗಿ ಸಂಘ ಸಂಸ್ಥೆಗಳಿಗೆ ಜವಾಬ್ದಾರಿ ನೀಡುವ ಬದಲು ಕೃಷಿ ಇಲಾಖೆಯೇ ವಹಿಸಿಕೊಂಡರೆ ಅನುಕೂಲ ಆಗುತ್ತದೆ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಲೋಚನಾ ಮಾತನಾಡಿ, ಜಿಲ್ಲೆಯಲ್ಲಿ 38 ಯಂತ್ರಧಾರೆ ಕಚೇರಿಗಳಿದ್ದು, ಧರ್ಮಸ್ಥಳ ಸಂಘದವರು 2 ಹಾಗು ವರ್ಷಾ ಎಂಬ ಸಂಸ್ಥೆ 25 ಕಚೇರಿಗಳ ಜವಾಬ್ದಾರಿ ವಹಿಸಿಕೊಂಡಿದೆ. ಕೆಲವು ಕಡೆ ರೈತರಿಂದ ದೂರು ಕೇಳಿಬರುತ್ತಿದೆ ಪರಿಹಾರ ಕಂಡುಕೊಳ್ಳಲಾಗುವುದು. ಕೃಷಿ ಪರಿಕರಗಳ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಅಂತವುಗಳ ಮಹಜರು ಮಾಡಿ ನಮ್ಮ ಸುಪರ್ದಿಗೆ ಪಡೆಯುತ್ತೇವೆ ಎಂದರು.

ಜಿಲ್ಲೆಯಲ್ಲಿ 4,49,313 ಹೆಕ್ಟೇರ್ ಕೃಷಿ ಭೂಮಿ ಇದ್ದು, ಆಗಸ್ಟ್‌ನಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಬಿತ್ತನೆ ಪ್ರಮಾಣದಲ್ಲಿ ಕುಸಿತವಾಗಿದೆ. ಈಲ್ಲೆಯ 80 ಸಾವಿರ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿಕೊಂಡಿದ್ದಾರೆ. ಹಿಂಗಾರು ಹಾಗು ಮುಂಗಾರಿನಲ್ಲಿ ಬಿತ್ತನೆ ಬೀಜ ಹಾಗು ರಸಗೊಬ್ಬರಕ್ಕೆ ಕೊರತೆಯಾಗಿಲ್ಲ. ಇ-ಕೆವೈಸಿ ಶೇ. 90 ರಷ್ಟು ಪೂರ್ಣಗೊಂಡಿದೆ. ನರೇಗಾ ಯೋಜನೆಯಡಿ ಶೇ. 75ರಷ್ಟು ಪ್ರಗತಿ ಸಾಧನೆಯಾಗಿದೆ. ರೈತರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಕುಟುಂಬಗಳಿಗೆ ಪರಿಹಾರ ತಲುಪಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಬೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಪಂ ಸಿಇಒ ಪೂರ್ಣಿಮಾ ಹಾಗು ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net