ಅಳವಂಡಿ: ಮಹಿಳಾ ಸದಸ್ಯರು ಸಂಘಗಳಲ್ಲಿ ನಂಬಿಕೆ-ಪ್ರಾಮಾಣಿಕತೆಯಿಂದ ಭಾಗವಹಿಸಬೇಕು ಎಂದು ತಾಲೂಕು ಪಂಚಾಯಿತಿ ಸಂಜೀವಿನಿ ಘಟಕದ ಕೃಷಿ ಯುವ ವೃತ್ತಿಪರ ಶರಣಪ್ಪ.ಎಚ್.ಕೆ.ತಿಳಿಸಿದರು.
ಸಮೀಪದ ಹಟ್ಟಿ ಗ್ರಾಮದಲ್ಲಿ ಶ್ರೀ ಕನಕಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಮಹಿಳೆಯರು ಆರ್ಥಿಕ ಅಭಿವೃದ್ದಿ ಹೊಂದಲು ಕೌಶಲ ಹಾಗೂ ಸ್ವಯಂ ಉದ್ಯೋಗಗಳ ತರಬೇತಿ ನೀಡಿ ವಿವಿಧ ಇಲಾಖೆಗಳ ಯೋಜನೆಗಳನ್ನು ತಲುಪಿಸಿ ಆರ್ಥಿಕ ಅಭಿವೃದ್ದಿ ಹೊಂದುವಂತೆ ಮಾಡಲಾಗುತ್ತಿದೆ. ಮಹಿಳೆಯರು ಸಂಘದ ಎಲ್ಲಾ ಚಟುವಟಿಕೆ ಹಾಗು ಸಭೆಯಲ್ಲಿ ಪಾಲ್ಗೊಳ್ಳಬೇಕು. ಸಭೆಯಲ್ಲಿ ನಡೆಯುವ ಹಾಗೂ ಮಾಹಿತಿ ನೀಡುವ ಸರಕಾರದ ಯೋಜನೆಗಳನ್ನು ತಿಳಿದು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಒಕ್ಕೂಟದ ಮಾಜಿ ಪಧಾದಿಕಾರಿಗಳು ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು. ನಂತರ ಆಹಾರ ಕಿಟ್ ವಿತರಿಸಲಾಯಿತು. ಪ್ರಮುಖರಾದ ವಿಜಯಲಕ್ಷ್ಮೀ ಮೇಗಳಮನಿ, ಕೃಷಿ ಸಖಿ ಇಮಾಂಬೀ, ಪಶುಸಖಿ ನಿರ್ಮಲಾ ಪಾಟೀಲ ಇತರರಿದ್ದರು.