

ಬಳ್ಳಾರಿ : ರೈತರು ಸರ್ಕಾರದ ವಿವಿಧ ಕೃಷಿ ಯೋಜನೆಗಳನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕೆ.ಎಂ. ಸೋಮಸುಂದರ ಹೇಳಿದರು.
ತಾಲೂಕಿನ ಹಲಕುಂದಿ, ಸಂಜೀವರಾಯನಕೋಟೆ, ಕುರುಗೋಡು, ಸಿಂಧಗೇರಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಎಫ್‌ಎನ್‌ಎಸ್ ಯೋಜನೆಯ ತೊಗರಿ ಸಜ್ಜೆ ಕ್ಷೇತ್ರಗಳ ಸಮಗ್ರ ಬೆಳೆ ನಿರ್ವಹಣೆ ಗುಚ್ಚ ಪ್ರಾತ್ಯಕ್ಷಿಕೆೆ ತೋರ್ಪಡಿಸಿ ಮಾತನಾಡಿದರು. ರೈತರು ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ವಂಚಿತರಾಗದೇ, ಪ್ರತಿಯೊಬ್ಬ ಅರ್ಹ ರೈತರು ಯೋಜನೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡು, ಫಲಾನುಭವಿಗಳಾಗಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಆಹಾರ ಭದ್ರತೆಯ ಸಂಯೋಜಕ ಡಾ.ಪಿ.ಕೆ ಸಾಹಾ ಮಾತನಾಡಿ, ತೊಗರಿಯ ಹೆಚ್ಚಿನ ಇಳುವರಿ ಪಡೆಯಲು ಆಧುನಿಕ ತಂತ್ರಜ್ಞಾನ ಮತ್ತು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಸಿರಿಧಾನ್ಯ ಬೆಳೆಗಳ ಮಹತ್ವ ಪ್ರತಿಯೊಬ್ಬ ರೈತರು ಅರಿಯಬೇಕು. ಕೂಲಿಕಾರರ ಸಮಸ್ಯೆ ನಿಭಾಯಿಸಲು ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಔಷಧಿ ಸಿಂಪರಣೆ ಮಾಡಲು ಡ್ರೋನ್ ಬಳಕೆ ಅನುಕೂಲವಾಗುತ್ತದೆ ಎಂದರು.