ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಲಿ

12sor5
ಚಂದ್ರಗುತ್ತಿಯಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಂ.ಮಾರ್ಯಪ್ಪ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿದರು. ಸರಿತಾ ಕೃಷ್ಣಪ್ಪ, ಯತೀಶ್, ಗೌಸ್, ಸಂಜೀವಿನಿ ಇತರರಿದ್ದರು.
Published on

ಸೊರಬ: ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಪ್ರಗತಿಪರ ಕೃಷಿಕ ರಘು ಸ್ವಾಧಿ ಹೇಳಿದರು.

ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ಕಲ್ಯಾಣ ಮಂಟಪದಲ್ಲಿ ಕೆನರಾ ಬ್ಯಾಂಕ್, ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ ಯೋಜನೆಗಳ ಕುರಿತು ಸಮರ್ಪಕವಾಗಿ ಮಾಹಿತಿ ನೀಡಬೇಕಾದ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದು ಖಂಡನೀಯ. ಇಂತಹ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಪಾಲ್ಗೊಳ್ಳಬೇಕು. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಸೌಲಭ್ಯ ದೊರೆಯುತ್ತಿಲ್ಲ. ವೈದ್ಯರ ಕೊರತೆ ಇದ್ದು ಇದರಿಂದ ಬಡವರಿಗೆ ಆರೋಗ್ಯ ಭಾಗ್ಯ ದೊರೆಯದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಜನರಿಗೆ ಮೂಲ ಸೌಲಭ್ಯಗಳು ದೊರೆಯಬೇಕು. ಸರ್ಕಾರ ಪ್ರತಿಯೊಂದು ವಸ್ತುವಿನ ಮೇಲೂ ತೆರಿಗೆ ವಿಧಿಸುತ್ತಿದೆ. ಆದರೆ, ಬಡವರಿಗೆ ಮಾತ್ರ ಯೋಜನೆಗಳು ತಲುಪುತ್ತಿಲ್ಲ. ಇಂತಹ ಕಾರ್ಯಕ್ರಮಗಳು ಕೇವಲ ನೆಪ ಮಾತ್ರಕ್ಕೆ ನಡೆಯುವುದಲ್ಲ. ಜನರಿಗೆ ಸದುಪಯೋಗ ಆಗಬೇಕು ಎಂದರು.
ಕೆನರಾ ಬ್ಯಾಂಕ್ ಸೊರಬ ಶಾಖೆಯ ವ್ಯವಸ್ಥಾಪಕ ಜಿ.ಅಶೋಕ್, ಕೇಂದ್ರ ಸರ್ಕಾರದ ಯೋಜನೆಗಳು, ರೈತರಿಗೆ ದೊರೆಯುವ ಸೌಲಭ್ಯಗಳು, ಸಬ್ಸಿಡಿ ಹಾಗೂ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಮಾರ್ಯಪ್ಪ ಅಡುಗೆ ಗ್ಯಾಸ್ ಸಿಲಿಂಡರ್ ವಿತರಿಸಿದರು.
ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಯತೀಶ್, ನೋಡಲ್ ಅಧಿಕಾರಿ ಗೌಸ್, ಸಂಜೀವಿನಿ ಒಕ್ಕೂಟದ ಸದಸ್ಯೆ ಶಶಿಕಲಾ ಶೇಟ್, ಪ್ರಕಾಶ್ ಮಿರ್ಜಿ, ಎಂ.ಜಿ.ಗಣಪತಿ, ಗ್ರಾಪಂ ಸಿಬ್ಬಂದಿ ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net