ಯೋಜನೆಗಳನ್ನು ತಲುಪಿಸುವುದು ಕರ್ತವ್ಯ

sri govt
ಬಾಳೆಹೊನ್ನೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ತಹಸೀಲ್ದಾರ್ ಅನೂಪ್ ಸಂಜೋಗ್ ಉದ್ಘಾಟಿಸಿದರು. ವಿಜಯ್‌ಕುಮಾರ್, ಈಶ್ವರ್, ಪ್ರಕಾಶ್, ಮಂಜುನಾಥ್, ನವೀನ್ ಇತರರಿದ್ದರು.
Published on

ಶೃಂಗೇರಿ: ಸರ್ಕಾರಿ ನೌಕರರು ಆಡಳಿತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸರ್ಕಾರಿ ಯೋಜನೆಗಳನ್ನು ಸಮರ್ಥವಾಗಿ ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸುವ ಹೊಣೆಗಾರಿಕೆ ಅವರ ಮೇಲಿದೆ ಎಂದು ತಹಸೀಲ್ದಾರ್ ಅನೂಪ್ ಸಂಜೋಗ್ ತಿಳಿಸಿದರು.

ಸೋಮವಾರ ಆಯೋಜಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ನೌಕರರಿಗೆ ಕಾನೂನು ಹಾಗೂ ಆಡಳಿತ ವ್ಯವಸ್ಥೆಯ ಜ್ಞಾನದ ಅರಿವು ಇರಬೇಕು. ಸರ್ಕಾರ ರೂಪಿಸುವ ಯೋಜನೆಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು. ಜನರಿಗೆ ನಿರಂತರವಾಗಿ ಸವಲತ್ತುಗಳನ್ನು ನೀಡುವ ಮಾನವೀಯ ಮೌಲ್ಯವಿರಬೇಕು. ಸರ್ಕಾರಿ ನೌಕರರ ಸಂಘ ಸಮನ್ವಯ, ಸಾಂಕಭಾವದಿಂದ ಕೆಲಸ ಮಾಡಿದರೆ ಮಾತ್ರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆಯಲು ಸಾಧ್ಯ ಎಂದರು.

ಮಾಹಿತಿ ಹಕ್ಕು ಕುರಿತು ಜಯಪುರ ಪಿಡಿಒ ಶಿವಕುಮಾರ್ ಮಾತನಾಡಿ, ಸರ್ಕಾರಿ ದಾಖಲೆಗಳನ್ನು ಪಡೆಯುವ ಹಕ್ಕು ಸಾರ್ವಜನಿಕರಿಗಿದೆ. ಹಲವು ದಾಖಲೆಗಳನ್ನು ಮಾತ್ರ ನೀಡುವ ಸ್ವಾತಂತ್ರೃ ಅಧಿಕಾರಿಗಳಿಗೆ ಇದೆ. ಆದರೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

ಸಂಘದ ಅಧ್ಯಕ್ಷ ಬಿ.ಜಿ.ನಾಗೇಶ್ ಮಾತನಾಡಿ, ಸಂಘ ಸಮಾಜಮುಖಿ ಸೇವೆ ಜತೆ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲು ಸನ್ನದ್ಧವಾಗಿದೆ. ನಿವತ್ತ ನೌಕರರಿಗೆ ಗೌರವ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನದ ಜತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ, ಏಳನೇ ವೇತನ ಜಾರಿ ಮುಂತಾದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಲು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇವೆ ಎಂದರು.

ಸಂಘದ ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನೂತನ ಅಧ್ಯಕ್ಷ ಬಿ.ಜಿ.ನಾಗೇಶ್ ಅವರನ್ನು ತಾಲೂಕಿನ ವಿವಿಧ ಸಂಘದ ಪದಾಧಿಕಾರಿಗಳು ಗೌರವಿಸಿದರು. ತಾಪಂ ಇಒ ಎಚ್.ಸುದೀಪ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ, ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಕೋಶಾಧ್ಯಕ್ಷ ಪೂರ್ಣೇಶ್, ಕೊಪ್ಪ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net