

ಮದ್ದೂರು: ರೈತರ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಇದರ ಸದುಪಯೋಗಕ್ಕೆ ಮುಂದಾಗುವ ಮೂಲಕ ಸ್ವಾವಲಂಬಿ ಬದುಕನ್ನು ಕಂಡುಕೊಂಡು ಪ್ರಗತಿ ಕಾಣಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಹನುಮಂತಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ ಕೃಷಿ ಅಭಿಯಾನ ಮಳೆ ಆಶ್ರಿತ ಪ್ರದೇಶ ಯೋಜನೆ ಅಡಿ ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದಾಗಿ ಆಹಾರ ಉತ್ಪಾದನೆ ಕುಸಿತ ಕಂಡಿದ್ದು, ಆಹಾರ ಸಮಸ್ಯೆ ತಲೆದೋರಿದ್ದು, ಇದನ್ನು ಮನಗಂಡ ಸರ್ಕಾರ ರೈತರ ಉತ್ತೇಜಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಸಬ್ಸಿಡಿ ಮತ್ತು ರಿಯಾಯಿತಿ ದರದಲ್ಲಿ ಅಗತ್ಯ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಜತೆಗೆ ಲಾಭ ಗಳಿಕೆಯತ್ತ ಮುಖ ಮಾಡಬೇಕು. ಹೆಚ್ಚಿನ ಇಳುವರಿ ಪಡೆಯಲು ತಾಂತ್ರಿಕತೆ ಮತ್ತು ಜೈವಿಕ ಗೊಬ್ಬರದ ಜತೆಗೆ ಲಘು ಪೋಷಕಾಂಶಗಳನ್ನು ಬಳಕೆ ಮಾಡಿಕೊಂಡು ಯಾಂತ್ರೀಕೃತ ಬೇಸಾಯದತ್ತ ಗಮನಹರಿಸಬೇಕೆಂದು ಹೇಳಿದರು.
ಭತ್ತ ಹಾಗೂ ರಾಗಿ ಬೆಳೆಯನ್ನು ಹೆಚ್ಚಿನ ರೀತಿಯಲ್ಲಿ ಇಳುವರಿ ಪಡೆಯಲು ರಸಗೊಬ್ಬರ ಮತ್ತು ಕೀಟನಾಶಕವನ್ನು ಸಕಾಲದಲ್ಲಿ ವಿತರಿಸುವ ಜತೆಗೆ ಮಣ್ಣಿನ ಫಲವತ್ತತೆಗೆ ಸಾವಯವ ಗೊಬ್ಬರ ಜೈವಿಕ ಗೊಬ್ಬರವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಸಹಾಯಧನ ಮತ್ತು ಸಬ್ಸಿಡಿ ದರದಲ್ಲಿ ಎರೆಹುಳು ಗೊಬ್ಬರ, ಜೈವಿಕ ಗೊಬ್ಬರಗಳನ್ನು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ರೈತರು ತಮ್ಮ ರಾಸುಗಳ ಗೊಬ್ಬರವನ್ನು ಅಧಿಕ ಬೆಲೆಗೆ ಮಾರಾಟ ಮಾಡಿಕೊಳ್ಳುವ ಮೂಲಕ ತಮ್ಮ ಜಮೀನನ್ನು ಬಂಜರು ಭೂಮಿಯಾಗಿ ಮಾಡುತ್ತಿರುವುದು ವಿಷಾದನೀಯವಾಗಿದ್ದು ಮುಂದಿನ ದಿನಗಳಲ್ಲಿ ರೈತರು ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರವನ್ನು ಪೂರೈಕೆ ಮಾಡುವುದರ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕೆಂದರು.
ವಿವಿಧ ಇಲಾಖೆಗಳಿಂದ ಸಿಗುವ ಯೋಜನೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ರೈತರು ಮಾಹಿತಿ ಪಡೆದುಕೊಂಡು ಸವಲತ್ತುಗಳ ಸದ್ಬಳಕೆಗೆ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮವಹಿಸಲಾಗುವುದೆಂದರು.
ಆತಗೂರು ಹೋಬಳಿ ವ್ಯಾಪ್ತಿಯ ಹನುಮಂತಪುರ ಹಾಗೂ ಆತಗೂರು ಗ್ರಾಮದ ಸುಮಾರು 26 ಫಲಾನುಭವಿಗಳಿಗೆ ಮೇವು ಕಟಾವು ಯಂತ್ರ, ತೂಕದ ಸಾಧನ ಸಲಕರಣೆ, ಇನ್ನಿತರ ಸಲಕರಣೆಗಳನ್ನು ರೈತರಿಗೆ ವಿತರಿಸಲಾಯಿತು.
ಸರ್ಕಾರದ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಸುವ ವಿಧಾನಗಳು, ಮುಂಗಾರು ರೈತರ ಬೆಳೆ ಸಮೀಕ್ಷೆ 2024-25ನೇ ಸಾಲಿನ, ಭತ್ತದ ಬೆಳೆ ಉತ್ಪಾದನೆ ಹೆಚ್ಚಿಸಲು ರೈತರು ಅಳವಡಿಕೊಳ್ಳಬೇಕಾಗಿರುವ ಸಲಹೆಗಳ ಪೋಸ್ಟರ್‌ಗಳನ್ನು ಶಾಸಕ ಕೆ.ಎಂ.ಉದಯ್ ಬಿಡುಗಡೆಗೊಳಿಸಿದರು.
ಗ್ರಾಪಂ ಸದಸ್ಯ ಪದ್ಮಮ್ಮ ಮುಖಂಡರಾದ ಪ್ರಸನ್ನಕುಮಾರ್, ನಾಗೇಗೌಡ, ಶಿವಲಿಂಗಯ್ಯ, ಶ್ಯಾಮ್‌ಪ್ರಸಾದ್, ಕೃಷ್ಣಪ್ಪ, ಕೃಷಿ ಸಹಾಯಕ ನಿರ್ದೇಶಕಿ ಪ್ರತಿಭಾ, ತಾಂತ್ರಿಕ ಕೃಷಿ ಅಧಿಕಾರಿ ದಯಾನಂದಕುಮಾರ್, ‘ಆತ್ಮ’ ಸಿಬ್ಬಂದಿ ವಿಜಯ್ ಇದ್ದರು.