ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ

2F2D26CB-6198-403F-AB50-E92BD737528F (1)
Published on

ಚಿಕ್ಕಬಳ್ಳಾಪುರ : ಸರ್ಕಾರದ ಬಡತನ ನಿರ್ಮೂಲನೆಯ ಯೋಜನೆಗಳನ್ನು ಸದ್ವಿನಿಯೋಗಪಡಿಸಿಕೊಳ್ಳಲು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಸಲಹೆ ನೀಡಿದರು.

ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಯ ಫಲ ಸಿಗದೆ ಇರುವುದರ ಬಗೆಗಿನ ಮಾಹಿತಿಯಿಂದ ಉಚ್ಚ ನ್ಯಾಯಾಲಯ ಆದೇಶದಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ್ ಗೌಡ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲೂ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ಮಾಹಿತಿ ನೀಡಿದರು.

ಸೆ.29 ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಬಡತನ ನಿರ್ಮೂಲನೆ ಯೋಜನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆಯಲಿದ್ದು ಇದರ ಆಧಾರದ ಮೇಲೆ ಪ್ರತಿ ಗ್ರಾಮಗಳಿಗೆ ಪ್ಯಾನಲ್ ವಕೀಲರನ್ನು ಕಾನೂನು ಸೇವೆಗಳ ಅಧಿಕಾರಿ ನೇಮಕ ಮತ್ತು ಅರೆ ಕಾಲಿಕ ಕಾನೂನು ಸ್ವಯಂ ಸೇವಕರ ಸಮಿತಿ ರಚಿಸಲಾಗುತ್ತದೆ. ಪ್ರತಿ ಗ್ರಾಮದಲ್ಲಿ ಮನೆಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸವಲತ್ತು ತಲುಪಿದೆಯೇ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲೂಕು ಸೇವಾ ಸಮಿತಿಗಳು ಬಡತನ ನಿರ್ಮೂಲನಾ ಯೋಜನೆಯ ಬಗ್ಗೆ ಮಾಹಿತಿ ಪಡೆದು, ಅರ್ಹ ವ್ಯಕ್ತಿಗಳಲ್ಲಿ ಅರಿವು ಮೂಡಿಸಲಾಗುತ್ತದೆ. ಸಮಿತಿಗಳ ಕಾರ್ಯ ವೈಖರಿ ಉಸ್ತುವಾರಿಯನ್ನು ನ್ಯಾಯಾಧೀಶರು ವಹಿಸಲಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಅಮರೇಶ್ ಮಾತನಾಡಿ, ಪ್ರಧಾನ ಮಂತ್ರಿ ರೋಜಗಾರ್ ಯೋಜನೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸ್ವರ್ಣ ಜಯಂತಿ ಷಹರಿ ರೋಜಗಾರ್ ಯೋಜನೆ, ಇಂದಿರಾ ಆವಾಸ್ ಯೋಜನೆ, ಸ್ವರ್ಣ ಜಯಂತಿ ಗ್ರಾಮ ರೋಜಗಾರ್ ಯೋಜನೆ, ಭಾಗ್ಯ ಲಕ್ಷ್ಮೀ ಯೋಜನೆ, ಸ್ತ್ರೀ ಸಂಘಗಳ ಅಭಿವೃದ್ಧಿ ಯೋಜನೆ, ಮಾತೃಶ್ರೀ ಯೋಜನೆ, ಉದ್ಯೋಗಸ್ಥ ಮಹಿಳೆಯರ ಪುನರ್ವಸತಿ ಯೋಜನೆ, ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಸೇರಿ ವಿವಿಧ ಯೋಜನೆಗಳನ್ನು ಸಮರ್ಪಕ ಅನುಷ್ಠಾನ, ಫಲಾನುಭವಿಗಳಿಗೆ ಹೆಚ್ಚಿನ ಸವಲತ್ತು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

ನ್ಯಾಯಾಧೀಶ ಎಚ್.ದೇವರಾಜು, ಜಿ.ಪಂ.ಯೋಜನಾ ನಿರ್ದೇಶಕ ಕೆ.ಗಿರಿಜಾಶಂಕರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net