ಯೋಜನೆಗಳ ಲಾಭ ಪಡೆದುಕೊಳ್ಳಿ

12Athni2
Published on

ಅಥಣಿ: ಆಧುನಿಕ ಕಾಲದಲ್ಲಿ ಶಿಕ್ಷಣ ಪದ್ಧತಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಲ್ಯಾಪ್‌ಟಾಪ್‌ಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಲಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಗೃಹ ಕಚೇರಿಯಲ್ಲಿ ಶನಿವಾರ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದ ಲ್ಯಾಪ್‌ಟಾಪ್ ಮತ್ತು ಅಂಗವಿಕಲರಿಗೆ ವಾಟರ್ ಬೇಡ್ ಸೇರಿ ಇತರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಗ್ರಾಮೀಣ ಮಕ್ಕಳು ಅಧ್ಯಯನ ಮಾಡುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಉನ್ನತ ಶಿಕ್ಷಣಕ್ಕೆ ನೆರವಾಗಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವರ್ಷಾ ಭಜಂತ್ರಿ, ನದಿ ಇಂಗಳಗಾವಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಲಕ್ಷ್ಮಿ ಮಠಪತಿ, ಅರಟಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರೀತಿ ಪೂಜಾರಿ, ಕೊಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವೀಣಾ ಪೂಜಾರಿ ಸೇರಿ ಐವರಿಗೆ ಸರ್ಕಾರದ ಪರವಾಗಿ ಬಿಇಒ, ಶಾಸಕರು ಲ್ಯಾಪ್‌ಟಾಪ್ ವಿತರಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎ.ಖೋತ, ಶಿಕ್ಷಣ ಇಲಾಖೆಯ ಅಧಿಕಾರಿ ಜಿ.ಎ.ಕರಾಟೆ, ಐ.ಎಸ್.ಹಂಪನ್ನವರ, ಜಿ.ಎಂ.ಐಗಳಿ, ಎ.ವಿ.ಕಾಂಬಳೆ, ಎಸ್.ವೈ.ಗಸ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net