

ಕೋಲಾರ: ಯೋಜನಾ ಇಲಾಖೆಯೂ ನನ್ನ ಬಳಿ ಇರುವುದರಿಂದ ಯಾವುದೇ ಹೊಸ ಯೋಜನೆ ರೂಪಿಸುವಾಗ ಕೋಲಾರ ಜಿಲ್ಲೆಗೆ ಮೊದಲ ಆದ್ಯತೆ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನಾ ಇಲಾಖೆ ಸಚಿವನಾಗಿರುವುದರಿಂದ ರೈತರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ, ಕೋವಿಡ್‌ನಿಂದ ತೋಟಗಾರಿಕೆ ಮತ್ತು ಯೋಜನಾ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿಲ್ಲ, ಆ.18,19ರಂದು ಎರಡೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕರೊನಾ 3ನೇ ಅಲೆ ತಡೆಗಟ್ಟುವುದು ಮೊದಲ ಆದ್ಯತೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 15 ರಿಂದ30 ದಿನಗಳ ಬಳಿಕ ಗಮನ ಹರಿಸುವೆ, ಜನರ ಜೀವ ರಕ್ಷಣೆಯಾಗದೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ? ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಲು ಸಿಎಂ ಜತೆ ಚರ್ಚಿಸುವೆ, ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ನವೀಕರಣಗೊಳಿಸಲು ತೀಮಾನಿಸಿದ್ದೇನೆ, ಮುಖ್ಯಮಂತ್ರಿಗಳಿಂದ ಅನುಮತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಲೂರಿನಲ್ಲಿ ಆಸ್ಪತ್ರೆ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಿ ಪಕ್ಕದಲ್ಲಿನ ಬೆಸ್ಕಾಂಗೆ ಸೇರಿದ ಜಾಗ ಬಳಸಿಕೊಂಡು ಆಸ್ಪತ್ರೆ ವಿಸ್ತರಿಸಲಾಗುವುದು, ಬೆಸ್ಕಾಂಗೆ ಪರ್ಯಾಯ ನಿವೇಶನ ನೀಡುವ ಬಗ್ಗೆ ಇಂಧನ ಸಚಿವರೊಂದಗೆ ಚರ್ಚಿಸುತ್ತೇನೆ, ಶ್ರೀನಿವಾಸಪುರ ಆಸ್ಪತ್ರೆಗೆ ಹೆಚ್ಚುವರಿಯಾಗಿ 4 ಡಯಾಲಿಸಿಸ್ ಯಂತ್ರ ಒದಗಿಸಲಾಗುವುದು. ಜಿಲ್ಲೆಯ ಯಾವೊಬ್ಬ ರೋಗಿಯೂ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡದೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಸರ್ವ ಪ್ರಯತ್ನ ಮಾಡಲಾಗುತ್ತದೆ ಎಂದರು.
ತಮಿಳುನಾಡು, ಆಂಧ್ರದಿಂದ ಕೋಲಾರ ಪ್ರವೇಶಿಸುವ ಎಲ್ಲರೂ ಆರ್‌ಟಿಪಿಸಿಆರ್ ಪ್ರಮಾಣ ಪತ್ರ ಹೊಂದಿರಲೇಬೇಕು. ಗಡಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ರೈತರು ಬೆಲೆ ಇಲ್ಲದೆ ಟೊಮ್ಯಾಟೊ ಮತ್ತಿತರ ಬೆಳೆಗಳನ್ನು ರಸ್ತೆಗೆ ಸುರಿಯುವ ಪರಿಸ್ಥಿತಿ ಉಂಟಾಗುತ್ತದೆ. ತೋಟಗಾರಿಕಾ ಸಚಿವನಾಗಿ ತಜ್ಞರ ಅಭಿಪ್ರಾಯ ಪಡೆದು ರೈತರ ಹಿತರಕ್ಷಣೆ ಮಾಡಲಾಗುವುದು ಎಂದರು.
ಉದ್ಯಾನ ನಿರ್ಮಾಣ: ಬೆಂಗಳೂರಿನಲ್ಲಿ ಕೆಂಪೇಗೌಡರು ನಿರ್ಮಿಸಿರುವ ಲಾಲ್‌ಬಾಗ್ ಮತ್ತು ಕಬ್ಬನ್‌ಪಾರ್ಕ್ ಹೊರತುಪಡಿಸಿ ಬೇರೆ ಯಾವುದೇ ಅತಿ ದೊಡ್ಡ ಉದ್ಯಾನವನ ಇಲ್ಲ. ಈ ಕೊರತೆ ನೀಗಿಸಲು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಬೃಹತ್ ಉದ್ಯಾನ ನಿರ್ಮಿಸಲು ಚಿಂತನೆ ನಡೆದಿದೆ.
ಕರೊನಾ ಇರುವುದರಿಂದ ಬೇರೆ ಅಭಿವೃದ್ಧಿ ಕಾರ್ಯದತ್ತ ಗಮನಿಸಲು ಸಾಧ್ಯವಾಗುತ್ತಿಲ್ಲ, ಇನ್ನು 15 ದಿನ ಕೋವಿಡ್ ವಿಚಾರ ಹೊರತುಪಡಿಸಿ ಬೇರೆ ಏನನ್ನೂ ಕೇಳಬೇಡಿ, ನಂತರ ಎಲ್ಲ ಜನಪ್ರತಿನಿಧಿಗಳು, ಸಾರ್ವಜನಿಕರ ಸಲಹೆ ಪಡೆದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಕುಟುಂಬಸ್ಥರು ಭಾಗಿ: ಸಚಿವ ಮುನಿರತ್ನ ಅವರ ಪತ್ನಿ, ಮಗಳು, ಮೊಮ್ಮಕ್ಕಳು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಾಮಾನ್ಯ ಪ್ರಜೆಗಳಂತೆ ಪಾಲ್ಗೊಂಡಿದ್ದರು. ಕ್ರೀಡಾಂಗಣದಿಂದ ನಿರ್ಗಮಿಸುವ ಮುನ್ನ ಅಲ್ಲಿದ್ದ ಕೆಲವರ ಒತ್ತಾಯದ ಮೇರೆಗೆ ಮೊಮ್ಮಗನೊಂದಿಗೆ ಫೋಟೋ ತೆಗೆಸಿಕೊಂಡರು, ಸಚಿವರು ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸರ್ಕಾರಿ ಕಾರಿನಲ್ಲಿ ತೆರಳಿದರೆ, ಖಾಸಗಿ ಕಾರಿನಲ್ಲಿ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದರು.