

ಭಾಲ್ಕಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಷಯದಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಣಮಂತರಾವ ಚವ್ಹಾಣ್ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಸೇರಿ ಎಲ್ಲ ಪಂಚ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ. ಯೋಜನೆಯಡಿ ನೋಂದಾಯಿಸಿರುವ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಗೃಹಜ್ಯೋತಿ ಅಡಿ ನೋಂದಾಯಿಸಿದ ಎಲ್ಲರಿಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಜೆಸ್ಕಾಂ ಅಧಿಕಾರಿಗಳು ಅನಧಿಕೃತ ಬಿಲ್ ನೀಡುತ್ತಿದ್ದಾರೆ. ಚಾಲನೆ ಇಲ್ಲದ ಮೀಟರ್‌ಗೂ ಬಿಲ್ ಕೊಡುತ್ತಿರುವ ದೂರು ಕೇಳಿಬಂದಿದ್ದು, ತಕ್ಷಣ ಸರಿಪಡಿಸಬೇಕು. ಅನ್ನಭಾಗ್ಯ ಯೋಜನೆಯಡಿ ಮೊದಲು ಹಣ ಬರುತ್ತಿತ್ತು. ಬಾಕಿ ಉಳಿದ ಅಕ್ಕಿ ಹಣ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇದನ್ನೂ ಸರಿಪಡಿಸುವಂತೆ ತಾಕೀತು ಮಾಡಿದರು.
ಗೃಹಲಕ್ಷ್ಮಿ ಅಡಿ ತಾಲೂಕಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ೬೧೦೯೯ ಅರ್ಜಿ ನೋಂದಣಿಯಾಗಿದ್ದು, ಅವುಗಳಲ್ಲಿ ಅಕೌಂಟ್ ಶೇಡ್ ಆಗದ ಕಾರಣ ೪೮೫ ಮತ್ತು ಐಟಿ, ಜಿಎಸ್‌ಟಿ ಕಾರಣಗಳಿಂದ ೫೨೬ ಅರ್ಜಿಗಳು ಅನೂರ್ಜಿತಗೊಂಡಿವೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾಹಿತಿ ನೀಡಿದರು.
ಶಕ್ತಿ ಅಡಿ ಉತ್ತಮ ಪ್ರಗತಿ ಕಾಣುತ್ತಿದ್ದು, ಯೋಜನೆ ಪ್ರಾರಂಭದಿಂದಲೂ ಸಾರಿಗೆ ಇಲಾಖೆ ಅಧಿಕ ಲಾಭ ಪಡೆಯುತ್ತಿದೆ ಎಂದು ಭಾಲ್ಕಿ ಡಿಪೋ ಮ್ಯಾನೇಜರ್ ಭದ್ರಪ್ಪ ಹುಡಗೆ ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೂರ್ಯಕಾಂತ ಬಿರಾದಾರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖ್ ಅಬ್ದುಲ್ ನಸೀರ್, ಸದಸ್ಯರಾದ ವಿಲಾಸ ಪಾಟೀಲ ದಾಡಗಿ, ಜಯಶ್ರೀ ಮಾನಕಾರಿ, ಓಂಕಾರ ಭಾತಂಬ್ರಾ, ಸಂಗಮೇಶ ವಾಲೆ ಇತರರಿದ್ದರು. ಉದ್ಯೋಗ ವಿನಿಮಯ ಮತ್ತು ಕೈಗಾರಿಕಾ ತರಬೇತಿ ಇಲಾಖೆ ಅಧಿಕಾರಿಗಳು ಗೈರು ಹಾಜರಿದ್ದರು.
ಸಭೆಯಲ್ಲಿ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ತಮ್ಮ ಕಚೇರಿ ಸಿಬ್ಬಂದಿ ಕಳುಹಿಸಿ ಅಧಿಕಾರಿಗಳು ಗೈರಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಅಧಿಕಾರಿಗಳು ಪೂರ್ವ ತಯಾರಿ ಮಾಡಿಕೊಂಡು ಮುಂದಿನ ಸಭೆಗೆ ಕಡ್ಡಾಯವಾಗಿ ಬರಬೇಕು.
| ಹಣಮಂತರಾವ ಚವ್ಹಾಣ್ ತಾಲೂಕು ಅಧ್ಯಕ್ಷ, ಗ್ಯಾರಂಟಿ ಯೋಜನೆಗಳ ಸಮಿತಿ