ಯೋಜನೆ ಲಾಭಕ್ಕೆ ಅಕ್ಷರ ಜ್ಞಾನ ಅಗತ್ಯ

saksharata
Published on

ಬೀದರ್: ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಲು ಅಕ್ಷರ ಜ್ಞಾನ ಹೊಂದುವುದು ಅತಿ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಹೇಳಿದರು.

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿರುವ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಕೆಲಸ ಇಡೀ ಸಮಾಜದ್ದಾಗಿದೆ. ಎಲ್ಲರೂ ಸಾಕ್ಷರರ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಸಾಕ್ಷರತಾ ಅಭಿಯಾನ ಮೂಲಕ ಎಲ್ಲರಿಗೂ ಶಿಕ್ಷಣ ನೀಡುವ ಕೆಲಸ ನಡೆದಿದೆ. ಸರ್ವಶಿಕ್ಷಣ ಅಭಿಯಾನ ಮೂಲಕ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ರಾತ್ರಿ ಸಮಯದಲ್ಲಿ ಅಕ್ಷರ ಜ್ಞಾನ ನೀಡಲಾಗುತ್ತಿದೆ. ವಯಸ್ಕರಿಗೆ ಓದಲು, ಬರೆಯಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ವಯಸ್ಕರ ಶಿಕ್ಷಣ ಇಲಾಖೆ ಮೂಲಕ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ಕರ್ನಾಟಕ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜಗನ್ನಾಥ ಹೆಬ್ಬಾಳೆ ವಿಶೇಷ ಉಪನ್ಯಾಸ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಂಜೀವಕುಮಾರ ಜುಮ್ಮಾ, ನಗರಸಭೆ ಎಇಇ ರಾಜಶೇಖರ ಮಠ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಕಾರ್ಯಕ್ರಮ ಸಹಾಯಕ ವೆಂಕಟ ಭಾಗ್ಯನಗರ, ತಾಲೂಕು ಕಾರ್ಯಕ್ರಮ ಸಂಯೋಜಕರಾದ ಶಿವರಾಜ ಮಲ್ಕಾಪುರೆ, ಡಾ.ರಾಜಕುಮಾರ ಹೆಬ್ಬಾಳೆ, ನಿಜಲಿಂಗಪ್ಪ ತಗಾರೆ ಇತರರಿದ್ದರು. ಜಿಪಂ, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಕರ್ನಾಟಕ ಸಾಹಿತ್ಯ ಸಂಘದಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.

ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಅನೇಕ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಬೋಧಕರು ರಾತ್ರಿ ವೇಳೆ ಕಲಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಬಹುತೇಕ ಅನಕ್ಷರಸ್ಥರು ಇಂದು ಅಕ್ಷರಸ್ಥರಾಗಿ ಸರ್ಕಾರದ ಸೇವೆ ಪಡೆಯುತ್ತಿದ್ದಾರೆ.| ರಾಮಚಂದ್ರನ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net