ಯೋಜನೆ ಅನುಷ್ಠಾನಕ್ಕೆ ಸಬೂಬು ಬೇಡ

page 2
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಮೊದಲ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
Published on

ತುಮಕೂರು : ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಘೋಷಿಸುವ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಸಂಬಂಧಪಟ್ಟ ಇಲಾಖೆಗಳೇ ಅನುಷ್ಠಾನ ಮಾಡಬೇಕು. ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳ ಜಾರಿ ಕುರಿತು ಅಂಕಿ ಅಂಶಗಳ ಮಾಹಿತಿ ನೀಡುವಾಗ ಎಚ್ಚರಿಕೆವಹಿಸಬೇಕು, ಇಲ್ಲವಾದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೂಚ್ಯವಾಗಿ ಎಚ್ಚರಿಕೆ ನೀಡಿದರು.


ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೊದಲ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಸಾಮಾನ್ಯರು ಹೆಚ್ಚಾಗಿ ಎಡತಾಕುವ ಕೃಷಿ, ಕಂದಾಯ ಸೇರಿ ಎಲ್ಲ ಇಲಾಖೆಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜನರನ್ನು ಕಚೇರಿಗೆ ವಿನಾಃ ಕಾರಣ ಅಲೆಸಬಾರದು. ಜನರಿಂದ ಯಾವುದೇ ಪ್ರತಿಫಲ ನಿರೀಕ್ಷಿಸಬಾರದು. ತಪ್ಪು ಮಾಡಿದ ಯಾರನ್ನೂ ಸಹಿಸುವುದಿಲ್ಲ ಎಂದರು. ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುವ ಭರವಸೆಯನ್ನು ನಾಡಿನ ಜನತೆಗೆ ನೀಡಿದ್ದು ಸಹಜವಾಗಿ ಸರ್ಕಾರದ ಮೇಲೆ ದೊಡ್ಡ ನಿರೀಕ್ಷೆ ಇದೆ. ಹಾಗಾಗಿ, ಜನರ ನಿರೀಕ್ಷೆಗೆ ತಕ್ಕಂತೆ ನಾವೆಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಳೆದ 4 ವರ್ಷಗಳಲ್ಲಿ ಕಷ್ಟ ಅನುಭವಿಸಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಜನಪರ ಕೆಲಸ ಮಾಡೋಣ ಎಂದು ತಿಳಿಸಿದರು.


ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್, ಉಪವಿಭಾಗಾಧಿಕಾರಿಗಳಾದ ಹೋಟೆಲ್ ಶಿವಪ್ಪ, ಕಲ್ಪಶ್ರೀ, ರಿಷಿ ಆನಂದ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಕೇಂದ್ರಸ್ಥಾನದಲ್ಲಿರದಿದ್ದರೆ ಕ್ರಮ: ಮಳೆ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಎದುರಾಗುವ ಜನ, ಜಾನುವಾರುಗಳಿಗೆ ಕುಡಿಯುವ ನೀರು ಸೇರಿ ಇತರ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ತಕ್ಕ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಹಾಜರಿರಬೇಕು. ಇಲ್ಲವಾದಲ್ಲಿ ಗಂಭೀರ ಕ್ರಮಕೈಗೊಳ್ಳಲಾಗುವುದು ಎಂದು ಪರಮೇಶ್ವರ ಎಚ್ಚರಿಸಿದರು. ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳು ಕಳಪೆಯಾಗಿದೆ. ಪ್ಲಾಸ್ಟಿಕ್ ಮಾದರಿ ನೀರಿನ ಕೊಳಾಯಿಗಳನ್ನು ಹಾಕಲಾಗಿದ್ದು ಇದರ ಬಾಳಿಕೆ ಕಡಿಮೆಯಿದೆ. ಈ ಕುರಿತಂತೆ ಕ್ರಮವಹಿಸುವಂತೆ ಹಾಗೂ ಜಿಲ್ಲೆಯಾದ್ಯಂತ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಸಿಸಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಜಿಲ್ಲೆಯಲ್ಲಿನ ಎಲ್ಲ ಕೆರೆಗಳ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು. ಎತ್ತಿನಹೊಳೆ ಯೋಜನೆ ಕುರಿತಂತೆ ಸಮಗ್ರ ಪರಿಶೀಲನಾ ಸಭೆಯನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅನರ್ಹರ ಪತ್ತೆಗೆ ಆಂದೋಲನ ಆಗಲಿ: ಬಿಪಿಎಲ್ ಪಡಿತರ ಚೀಟಿ ನೀಡುವ ಮುನ್ನ 10-15 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸಿ ಅರ್ಹರಿಗೆ ನೀಡಬೇಕಾಗಿರುತ್ತದೆ. ಆದರೆ, ಜಿಲ್ಲೆಯಲ್ಲಿ ಶೇ.80 ಬಿಪಿಎಲ್, ಅಂತ್ಯೋದಯ ಕಾರ್ಡ್‌ಗಳನ್ನು ನೀಡಲಾಗಿದೆ. ಅನರ್ಹರೂ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವ ಸಾಧ್ಯತೆ ಇದ್ದು, ಆಂದೋಲನ ರೀತಿ ಬಿಪಿಎಲ್ ಕಾರ್ಡ್ ಪರಿಶೀಲನೆ ನಡೆಸಿ ಅನರ್ಹರನ್ನು ಬಿಪಿಎಲ್ ಪಟ್ಟಿಯಿಂದ ಹೊರಗಿಡುವಂತೆ ಸಚಿವ ಜಿ.ಪರಮೇಶ್ವರ ಅವರು ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿಗೆ ಸೂಚಿಸಿದರು.

ಬೆಸ್ಕಾಂ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಸಚಿವ ಪರಮೇಶ್ವರ: ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ತಡಕಾಡಿದ ಬೆಸ್ಕಾಂ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದ ಪರಮೇಶ್ವರ, ಜಿಲ್ಲೆಯಲ್ಲಿನ ಪ್ರತಿ ಗ್ರಾಹಕರ ವಾರ್ಷಿಕ ವಿದ್ಯುತ್ ಸರಾಸರಿ ಬಳಕೆ ಕುರಿತಂತೆ ಮಾಹಿತಿಯನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಲೋಕೇಶ್‌ಗೆ ತಾಕೀತು ಮಾಡಿದರು.

ಗೊಬ್ಬರ, ಬಿತ್ತನೆಬೀಜ ದಾಸ್ತಾನು: ಗೊಬ್ಬರ, ಬಿತ್ತನೆಬೀಜ, ದಾಸ್ತಾನು ಹಾಗೂ ವಿತರಣೆ ಬಗ್ಗೆ ಆದ್ಯತೆ ಅನುಸರಿಸಿ ಕೃಷಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಮಳೆ ಜಾಸ್ತಿ ಬಂದಲ್ಲಿ ಅದಕ್ಕೂ ಪೂರಕ ತಯಾರಿ ನಡೆಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆಲಸವಾಗಬೇಕು. ಶಾಲೆ ಬಿಟ್ಟ ಮಕ್ಕಳ ಕುರಿತು ಅಧಿಕಾರಿಗಳು ನಿಗಾವಹಿಸಿ ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹ ಪದ್ಧತಿ ತಪ್ಪಿಸಬೇಕು. ಹೀಗೆ ಮಾಡಿದಲ್ಲಿ ಶಾಲೆ ತ್ಯಜಿಸುವ ಮಕ್ಕಳ ಸಂಖ್ಯೆ ಕಡಿಮೆಯಾಗುವುದು. ಮಕ್ಕಳಿಗೆ ಪಠ್ಯಪುಸ್ತಕ, ಯೂನಿಫಾರಂಗಳನ್ನು ಸಕಾಲಕ್ಕೆ ಒದಗಿಸಬೇಕು ಎಂದರು.

ಜಿಲ್ಲ್ಲೆಯಲ್ಲಿ ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಲ್ಲಿ ಅಂತಹವರನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ಹೂಡಿ. ಹೀಗೆ ಮಾಡಿದಲ್ಲಿ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತುಗಳು ದೊರಕುತ್ತವೆ.| ಕೆ.ಎನ್.ರಾಜಣ್ಣ ಸಹಕಾರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net