

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ. ಜನರಿಗೆ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಇಲ್ಲಿಯ ಮಾರ್ಕೆಂಡೇಯ ನದಿ ತೀರದಲ್ಲಿ ಹೆಸ್ಕಾಂ ವತಿಯಿಂದ 4.47 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ನೂತನ ವಿದ್ಯುತ್ ವಿತರಣೆ ಕೇಂದ್ರ ಉದ್ಘಾಟನೆ ಹಾಗೂ 122 ಕಿ.ಮೀ. ಉದ್ದದ 37.91 ಕೋಟಿ ರೂ.ವೆಚ್ಚದ ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಕಾನೂನಿನ ತೊಡಕುಗಳು ಇದ್ದರೂ ಸಹ ಸಾರ್ವಜನಿಕರ ಹಿತಕ್ಕಾಗಿ ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸಲು ಅಧಿಕಾರಿಗಳ ಶ್ರಮ ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಸಲಹೆ, ಸೂಚನೆ ಮಾರ್ಗದರ್ಶನದಿಂದ ಕ್ಷೇತ್ರ ಸೇರಿ ಇಡೀ ಬೆಳಗಾವಿ ಜಿಲ್ಲೆಯನ್ನು ಮಾದರಿಯಾಗಿ ಮಾಡಲು ಶ್ರಮಿಸುತ್ತೇನೆ. ಇಂಧನ ಇಲಾಖೆ ಮಹತ್ವದ ಇಲಾಖೆಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮಹತ್ವದ ಖಾತೆಯನ್ನು ನಿರ್ವಹಿಸುತ್ತಿದ್ದು, ಅಭಿವೃದ್ಧಿ ಕಾರ್ಯದಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಾರೆ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಭೂಗತ ಕೇಬಲ್ ಕಾಮಗಾರಿ ಹೊಂದಿರುವ ಕರ್ನಾಟಕದ ಗೋಕಾಕ ಮೊದಲ ನಗರವಾಗಿ ಹೊರಹೊಮ್ಮಲಿದೆ. ಇದಕ್ಕೆ ಸಚಿವ ರಮೇಶ ಜಾರಕಿಹೊಳಿ ಅವರ ಪ್ರಯತ್ನ ಮಹತ್ವದಾಗಿದೆ. ಒಳ್ಳೆಯ ಕಾರ್ಯಗಳಿಗೆ ಜನತೆ ಸದಾ ಸಹಕಾರ ನೀಡುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯದಲ್ಲಿ ಹೆಗಲು ಕೊಡುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ. ಮುನಿರಾಜ, ಮುಖ್ಯ ಅಭಿಯಂತ ಎಂ.ಎಂ. ಬೇವಿನಮರದ, ಅಧೀಕ್ಷಕ ಅಭಿಯಂತ ಗಿರಿಧರ ಕುಲಕರ್ಣಿ, ರಾಜೇಂದ್ರ ದೇಸಾಯಿ, ಪ್ರಕಾಶ ಹೊಳೆಪ್ಪಗೋಳ, ಶಿವಾನಂದ ಹಿರೇಮಠ, ಕಿರಣ ಸಣ್ಣಕ್ಕಿ, ಎಸ್.ಪಿ. ವರಾಳೆ, ಎಂ.ಎಸ್.ನಾಗನ್ನವರ, ಗಣಪತಿ ಖಾನಪ್ಪನವರ, ಎಸ್.ಎ. ಕೋತವಾಲ, ಸಿದ್ಧಲಿಂಗ ದಳವಾಯಿ, ಮಹಾಂತೇಶ ತಾಂವಶಿ, ಶಾಮಾನಂದ ಪೂಜೇರಿ, ಆನಂದ ಗೋಟಡಕಿ, ಸೋಮಶೇಖರ ಮಗದುಮ್ಮ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.