ಯೋಗ್ಯ ಸ್ಥಳದಲ್ಲಿ ಮನೆ ನಿರ್ಮಾಣ

4CBP1(cmc)
Published on

ಚಿಕ್ಕಬಳ್ಳಾಪುರ : ತಾಲೂಕಿನ ಪುಟ್ಟತಿಮ್ಮನಹಳ್ಳಿಯಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಮಂಜೂರಾಗಿರುವ 25 ಎಕರೆ ಜಮೀನನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದಿಂದ ನಗರಸಭೆ ಕಂದಾಯ ಇಲಾಖೆಗೆ ವಾಪಸ್ ನೀಡುವಂತಾಗಿದೆ.

ತ್ಯಾಜ್ಯ ವಿಲೇವಾರಿ ಘಟಕದಿಂದ 200 ಮೀಟರ್ ಅಂತರದ ಪ್ರದೇಶವು ಜನ ವಸತಿಗೆ ಯೋಗ್ಯವಲ್ಲ. ಇದರಿಂದ ಪುಟ್ಟತಿಮ್ಮನಹಳ್ಳಿ ಘಟಕದ ಬಳಿ ಗುರುತಿಸಿರುವ ಜಮೀನನ್ನು ಹಿಂದಿರುಗಿಸಿ, ಬೇರೊಂದು ಕಡೆ ಸ್ಥಳ ಗುರುತಿಸುವ ನಿಟ್ಟಿನಲ್ಲಿ ಚರ್ಚೆಯಾಗುತ್ತಿದೆ.

ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಪುಟ್ಟತಿಮ್ಮನಹಳ್ಳಿಯ ಗ್ರಾಮದ ಸರ್ವೇ ನಂ.9ರಲ್ಲಿ 25 ಎಕರೆ ಜಮೀನು ಗುರುತಿಸಲಾಗಿದೆ. ಇದಕ್ಕೆ ಕಂದಾಯ ಇಲಾಖೆಯು ಅಧೀನದಲ್ಲಿದ್ದ ಜಾಗವನ್ನು ನಗರಸಭೆಗೆ ಹಸ್ತಾಂತರಿಸಿದೆ. ಇದರ ನಡುವೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜನ ವಸತಿ ಯೋಗ್ಯದ ನಿಯಮ ಹಿನ್ನೆಲೆಯಲ್ಲಿ ಸ್ಥಳಾಂತರ ಅನಿವಾರ್ಯವಾಗಿದೆ.

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರತಿನಿತ್ಯ ಕಸ ಸಂಗ್ರಹವಾಗುತ್ತಿರುತ್ತದೆ. ಹಾಗೆಯೇ ವೈಜ್ಞಾನಿಕ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದೇ ವೇಳೆ ದುರ್ವಾಸನೆ, ಸುತ್ತಲಿನ ಪ್ರದೇಶ ಅನೈರ್ಮಲ್ಯದ ವಾತಾವರಣ ನಿರ್ಮಾಣ ಆಗಿರುತ್ತದೆ. ಇಂತಹ ಪ್ರದೇಶದಲ್ಲಿ ಮನೆಗಳ ನಿರ್ಮಾಣದಿಂದ ಸ್ಥಳೀಯ ಜನರು ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಸೊಳ್ಳೆಗಳ ಕಾಟ, ಕಸದ ಕಿರಿಕಿರಿ ಸೇರಿ ನಾನಾ ಸಮಸ್ಯೆ ಅನುಭವಿಸಬೇಕಾಗುತ್ತದೆ. ಇದರಿಂದ ಜನರು ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡದಿರಲು ಯೋಗ್ಯ ಸ್ಥಳದಲ್ಲಿ ಮನೆ ನಿರ್ಮಿಸಬೇಕಾಗಿದೆ. ಇದರ ನಡುವೆ ಪುಟ್ಟತಿಮ್ಮನಹಳ್ಳಿಯಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಗುರುತಿಸಿರುವ ಜಾಗವು ತ್ಯಾಜ್ಯ ಘಟಕದ 200 ಮೀಟರ್ ಅಂತರದ ವ್ಯಾಪ್ತಿಯೊಳಗಿದೆ. ಇದಕ್ಕೆ 25 ಎಕರೆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಇದರ ಬಗ್ಗೆ ಈಗಾಗಲೇ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದು, ವಸತಿ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ಸ್ಥಳ ಗುರುತಿಸಲು ಸಲಹೆ ಕೇಳಿ ಬಂದಿದೆ.

ಪುಟ್ಟತಿಮ್ಮನಹಳ್ಳಿ ಕಸ ಸಂಗ್ರಹ: ನಗರದ 31 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪ್ರತಿದಿನ 26 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಪ್ರತಿದಿನ 21 ಟನ್ ಸಂಸ್ಕರಣೆಯಾಗುತ್ತಿದೆ. ಉಳಿದಂತೆ 5 ಟನ್ ಕಸ ಹಾಗೆಯೇ ಉಳಿಯುತ್ತಿದೆ. ಇದರಿಂದ ಪುಟ್ಟತಿಮ್ಮನಹಳ್ಳಿ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ದಾಸ್ತಾನು ನಿರ್ವಹಣೆ ಒತ್ತಡ ಹೆಚ್ಚಾಗಿದೆ.

ಆಶ್ರಯ ಯೋಜನೆ ಪ್ರಗತಿ: ನಗರ ಆಶ್ರಯ ಯೋಜನೆಯಡಿ 4789 ಫಲಾನುಭವಿಗಳನ್ನು ಗುರುತಿಸಿದ್ದು, 142 ಎಕರೆ ಜಮೀನಿನ ಪೈಕಿ 46 ಎಕರೆ ಮಂಜೂರಾಗಿದೆ. ಈಗಾಗಲೇ ಕಂದವಾರದಲ್ಲಿ 91 ಮಂದಿಗೆ ಹಕ್ಕುಗಳನ್ನು ವಿತರಿಸಲಾಗಿದೆ. ಉಳಿಕೆ 71 ಎಕರೆ ಪ್ರದೇಶದಲ್ಲಿ 2419 ನಿವೇಶನಗಳನ್ನೊಳಗೊಂಡ ಬಡಾವಣೆ ನಕ್ಷೆ ಅನುಮೋದನೆಯಾಗಿದೆ. 2270 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಕಳವಾರ ಗ್ರಾಮದ ಸ.ನಂ.35ರಲ್ಲಿ 21 ಎಕರೆ ಗುರುತಿಸಲಾಗಿದೆ. ಮತ್ತೊಂದೆಡೆ ನಗರ ವಸತಿ ಯೋಜನೆಯಡಿ ಸಮೀಕ್ಷೆಯಲ್ಲಿ 3657 ಅರ್ಜಿ ಸ್ವೀಕರಿಸಿದ್ದು, 3397 ಅರ್ಜಿಗಳು ಅನುಮೋದನೆ ಗೊಂಡಿವೆ. 1013 ಮನೆ ನಿರ್ಮಾಣ ಕಾಮಗಾರಿ ಮುಗಿದಿದೆ.

ಪುಟ್ಟತಿಮ್ಮನಹಳ್ಳಿಯ ಸರ್ವೇ ನಂ 9ರಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಮಂಜೂರಾಗಿರುವ 25 ಎಕರೆ ಜಮೀನಿನ ಪಕ್ಕದಲ್ಲಿ ನಗರಸಭೆಗೆ ಸೇರಿ ತ್ಯಾಜ್ಯ ವಿಲೇವಾರಿ ಘಟಕ ಇದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜನ ವಸತಿಗೆ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸಲು ಚರ್ಚಿಸಲಾಗಿದೆ. ಬದಲಿ ಸ್ಥಳ ಗುರುತಿಸಲಾಗುವುದು. ಡಿ.ಎಸ್.ಆನಂದ್ ರೆಡ್ಡಿ, ನಗರಸಭೆ ಅಧ್ಯಕ್ಷ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net