

ಬೀದರ್: ಉತ್ತರಪ್ರದೇಶದ ಹಾಥರಸ್ ಘಟನೆ ಮತ್ತು ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಮಂಗಳವಾರ ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಇಲ್ಲಿಯ ಅಂಬೇಡ್ಕರ್ ವೃತ್ತದ ಹತ್ತಿರ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ನೇತೃತ್ವದಲ್ಲಿ ಧರಣಿ ನಡೆಯಿತು. ಹಾಥರಸ್ ಯುವತಿ ಅತ್ಯಾಚಾರ, ಕೊಲೆ ಘಟನೆ ಗಮನಿಸಿದರೆ ಅಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯೇ ಬುಡಮೇಲು ಮಾಡುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ಯೋಗಿ ಆದಿತ್ಯನಾಥ ಸರ್ಕಾರ ವಜಾಗೊಳಿಸಬೇಕು ಎಂದು ಖಂಡ್ರೆ ಆಗ್ರಹಿಸಿದರು.
ಸಂತ್ರಸ್ತೆ ಕುಟುಂಬಕ್ಕೆ ಸಾಂತ್ವನ ಹೇಳಲು ಹೋದ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ಕೇಸ್ ಹಾಕಲಾಗಿದೆ. ಅವರನ್ನು ಎಳೆದಾಡಿ ದೌರ್ಜನ್ಯ ನಡೆಸಲಾಗಿದೆ. ಇದು ಗುಂಡಾರಾಜ್ ವ್ಯವಸ್ಥೆ. ಜನರ ದ್ವನಿ ದಮನ ಮಾಡುತ್ತಿರುವ ಬಿಜೆಪಿಯವರಿಗೆ ಪಾಠ ಕಲಿಸುವ ಜನ ಹತ್ತಿರವಾಗಿವೆ ಎಂದರು.
ಬೇಡಿಕೆ ಸಂಬಂಧ ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಶಾಸಕ ರಹೀಮ್ ಖಾನ್ ಇತರರು ಮಾತನಾಡಿದರು. ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಮಾಜಿ ಎಂಎಲ್ಸಿ ಕೆ. ಪುಂಡಲೀಕರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಪ್ರಮುಖರಾದ ಅಮೃತರಾವ ಚಿಮಕೋಡೆ, ಚಂದ್ರಕಾಂತ ಹಿಪ್ಪಳಗಾಂವ, ರೋಹಿದಾಸ ಘೋಡೆ, ಶಂಕರ ದೊಡ್ಡಿ, ಇರ್ಷಾದ್ ಪೈಲ್ವಾನ್, ಸುಧಾಕರ ಕೊಳ್ಳುರ್, ಗೋವರ್ಧನ ರಾಠೋಡ್ ಇತರರಿದ್ದರು.
ಉತ್ತರ ಪ್ರದೇಶದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಯೋಗಿ ಆದಿತ್ಯನಾಥ ಸರ್ಕಾರ ಸಂತ್ರಸ್ತರ ಬೆನ್ನಿಗೆ ನಿಲ್ಲುವ ಬದಲು ಪ್ರಕರಣವೇ ತಿರುಚಲು ಹೊರಟಿರುವುದು ಖಂಡನೀಯ. ಬಿಜೆಪಿ ಆಡಳಿತದಲ್ಲಿ ದೇಶಕ್ಕೆ ಕೆಟ್ಟ ದಿನಗಳು ಬಂದಿವೆ.| ರಹೀಮ್ ಖಾನ್, ಶಾಸಕ