ಯೋಗಾಯೋಗ ನಿರಂತರ ಅಭ್ಯಾಸದಿಂದ ಬಾರದು ರೋಗ

DSC_0977
Published on

ಚಿತ್ರದುರ್ಗ: ವಿದ್ಯಾರ್ಥಿ ಸಮೂಹ ದೇಹ ದಂಡಿಸಲು ಅತ್ಯುತ್ಸಾಹದಿಂದ ತುಡಿಯುತ್ತಿತ್ತು. ಸಾಲುಸಾಲಾಗಿ ಸಭಾಂಗಣ ಪ್ರವೇಶಿಸಿದ ಮಕ್ಕಳು ಮ್ಯಾಟ್ ಹಾಸಿಕೊಂಡು ಒಬ್ಬರ ಹಿಂದೊಬ್ಬರು ಕುಳಿತರು. ಬಣ್ಣಬಣ್ಣದ ಸಮವಸ್ತ್ರಗಳಲ್ಲಿ ಕುಳಿತ ಮಕ್ಕಳು ಸುಂದರ ಕೈತೋಟದ ನೆನಪು ತಂದರು.
‘ವಿಜಯವಾಣಿ’ ಹಾಗೂ ‘ಎಸ್‌ಆರ್‌ಎಸ್’ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಸಂಸ್ಥೆಯ ಅನಂತಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ನಡೆದ 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಂಡ ದೃಶ್ಯವಿದು.
ಜಿಲ್ಲಾ ಯೋಗಾಸನ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ, ಯೋಗ ಗುರು ಎಲ್.ಎಸ್.ಚಿನ್ಮಯಾನಂದ ಅವರು ಸೂಚಿಸಿದಂತೆ 500 ವಿದ್ಯಾರ್ಥಿಗಳು ಯೋಗಾಸನಗಳನ್ನು ಪ್ರದರ್ಶಿಸಿದರು. ಯೋಗ ಶಿಕ್ಷಕ ರಂಗಸ್ವಾಮಿ ಸಾಥ್ ನೀಡಿದರು. ಸತತ 1 ತಾಸು ನಡೆದ ಪ್ರದರ್ಶನದಲ್ಲಿ ಮಾರ್ಗದರ್ಶಕರ ಆಣತಿಯಂತೆ ತಪ್ಪಿಲ್ಲದೆ, ಯೋಗ ಮಾಡಿ ಕಣ್ಮನ ಸೆಳೆದರು.

  • ಓಂಕಾರದ ಝೇಂಕಾರ: ಓಂಕಾರದ ಝೇಂಕಾರದೊಂದಿಗೆ ಯೋಗದ ಲೋಕ ಪ್ರವೇಶಿಸಿದ ಮಕ್ಕಳು ಕೈಗಳು, ಸೊಂಟ, ಕತ್ತು, ಭುಜ, ಮೊಣಕಾಲು ಚಲನೆಯ ಸೂಕ್ಷ್ಮ ವ್ಯಾಯಾಮಗಳ ಮೂಲಕ ಯೋಗಾಭ್ಯಾಸಕ್ಕೆ ತಯಾರಾದರು. ನಂತರ ತಾಡಾಸನ, ವೃಕ್ಷಾಸನ, ಹಸ್ತ ಪಾದಾಸನ, ಅರ್ಧ ಚಕ್ರಾಸನ, ಉತ್ಥಿತ ತ್ರಿಕೋನಾಸನಗಳ ಮೂಲಕ ಆಳಕ್ಕಿಳಿದರು.
    ವಜ್ರಾಸನ, ಬದ್ಧ ಕೋನಾಸನದಿಂದ ಶವಾಸನದವರೆಗೆ ನಿಂತು, ಕೂತು, ಮಲಗಿ ಮಾಡಬಹುದಾದ ಆಸನಗಳನ್ನು ಪ್ರದರ್ಶಿಸಿದರು. ಧ್ಯಾನ, ಸಂಕಲ್ಪ ಹಾಗೂ ಶಾಂತಿ ಮಂತ್ರ ಪಠಣದೊಂದಿಗೆ ಮುಕ್ತಾಯವಾಯಿತು.
    ವಿಜಯವಾಣಿ ಮುಖ್ಯ ಉಪಸಂಪಾದಕ ಹರ್ಷ ನ. ಪುರೋಹಿತ ಮಾತನಾಡಿದರು. ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್.ಕುಮಾರಸ್ವಾಮಿ, ವರದಿಗಾರ ಕೆ.ಎಸ್.ಪ್ರಣವಕುಮಾರ್, ಛಾಯಾಚಿತ್ರಗ್ರಾಹಕ ವರದರಾಜ್ ಯಾದವ್, ರಂಗಣ್ಣ ಹಾಗೂ ಶಿಕ್ಷಕ ವರ್ಗ, ಸಿಬ್ಬಂದಿ ಇದ್ದರು.
  • ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಭಾರತ
    ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 6 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗದ ಮಹತ್ವವನ್ನು ವಿಶ್ವಸಂಸ್ಥೆ ಗುರುತಿಸಿದ 2015 ರ ಜೂ. 21 ರಿಂದ ವಿಶ್ವಾದ್ಯಂತ ಆಚರಿಸುತ್ತಿದೆ ಎಂದು ಹೇಳಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ಸಮೂಹ ಉನ್ನತ ಹುದ್ದೆ ಅಲಂಕರಿಸಲು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪರೀಕ್ಷೆ ಎದುರಿಸುವ ವೇಳೆ ಒತ್ತಡ ಸಾಮಾನ್ಯ. ಪ್ರಸ್ತುತ ಎಲ್ಲ ಕ್ಷೇತ್ರಗಳೂ ಇದಕ್ಕೆ ಹೊರತಲ್ಲ. ಹೀಗಾಗಿ ಇದು ಒತ್ತಡದ ಯುಗವೂ ಹೌದು. ಒತ್ತಡಕ್ಕೆ ಕಡಿವಾಣ ಹಾಕಲು ಯೋಗದಿಂದ ಮಾತ್ರ ಸಾಧ್ಯ. ಅದಕ್ಕಾಗಿ ನಿತ್ಯ ಅರ್ಧ ತಾಸು ಮೀಸಲಿಡಿ ಎಂದು ಸಲಹೆ ನೀಡಿದರು. ಹಿಂದುಳಿದ ಜಿಲ್ಲೆಯಲ್ಲಿ ಬಿಎಸ್ಸಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದವಿಯನ್ನು ಎಸ್‌ಆರ್‌ಎಸ್ ಸಂಸ್ಥೆಯಲ್ಲಿ ಆರಂಭಿಸಿದರೆ, ಮುಂದಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
  • *ಕೋಟ್
    ಯೋಗದಿಂದ ಮಾನವನ ದೇಹದ ಪ್ರತಿ ಭಾಗಕ್ಕೂ ಸಾಕಷ್ಟು ಅನುಕೂಲವಿದೆ. ಹೀಗಾಗಿ ಮಕ್ಕಳು ಯೋಗಾಭ್ಯಾಸದಲ್ಲಿ ತೊಡಗುವುದು ಒಳ್ಳೆಯದು. ನನ್ನ ಆರೋಗ್ಯ ಕೂಡ ಸುಧಾರಿಸಿ, ಉತ್ತಮವಾಗಲು ಚಿನ್ಮಯಾನಂದ ಗುರು ಕಾರಣ. ಇದಕ್ಕೆ ನಾನೇ ನಿದರ್ಶನ.
    ಬಿ.ಎ.ಲಿಂಗಾರೆಡ್ಡಿ, ಸಂಸ್ಥೆಯ ಅಧ್ಯಕ್ಷರು
  • *ಕೋಟ್
    ವಿದ್ಯಾರ್ಥಿಗಳು ಸಾಧಕರಾಗಲು, ಕಂಡ ಕನಸು ನನಸಾಗಲು ಯೋಗಾಭ್ಯಾಸದಲ್ಲಿ ತೊಡಗುವುದರಿಂದ ಸಾಧ್ಯವಾಗಲಿದೆ. ಉತ್ತಮ ಭವಿಷ್ಯಕ್ಕೂ ನಾಂದಿಯಾಗಲಿದೆ.
    ಪ್ರಭಾಕರ್, ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ಪ್ರಾಚಾರ್ಯ *ಕೋಟ್
    ವಜ್ರಾಸನ, ಬದ್ಧ ಕೋನಾಸನ ನೆನಪಿನ ಶಕ್ತಿ ಹೆಚ್ಚಿಸಲು ವಿದ್ಯಾರ್ಥಿ ಸಮೂಹಕ್ಕೆ ಬಹಳ ಉಪಯುಕ್ತವಾಗಿವೆ. ಶಿಕ್ಷಣ ಸೇರಿ ಆಸಕ್ತ ವಿಷಯಗಳಲ್ಲಿ ಏಕಾಗ್ರತೆ ಸಾಧಿಸಲು ಯೋಗಾಭ್ಯಾಸ ಉತ್ತಮ ಮಾರ್ಗ.
    ಎಲ್.ಎಸ್.ಚಿನ್ಮಯಾನಂದ, ಯೋಗ ಗುರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net