ಯೋಗಾಭ್ಯಾಸದಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಆರ್‌ಟಿಒ ನಿರೀಕ್ಷಕ ಧನ್ವಂತರಿ ಎಸ್. ಒಡೆಯರ್ ಅಭಿಪ್ರಾಯ

02 Nela Ph 01 Udgatane
Published on

ನೆಲಮಂಗಲ ಯೋಗ ಶಿಕ್ಷಣದಿಂದ ವ್ಯಕ್ತಿಯಲ್ಲಿ ಪರಿಪೂರ್ಣ ಆರೋಗ್ಯ ಹಾಗೂ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಧನ್ವಂತರಿ ಎಸ್. ಒಡೆಯರ್ ಅಭಿಪ್ರಾಯಪಟ್ಟರು.

ನಗರದ ದಿವ್ಯಜ್ಯೋತಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ಆಡಳಿತ ಮಂಡಳಿ ಮಂಗಳವಾರ ಆಯೋಜಿಸಿದ್ದ ಯೋಗ ಶಿಕ್ಷಣದ ಮೂಲಕ ಯುವ ಸಬಲೀಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆತ್ಮಜ್ಞಾನವನ್ನು ಪಡೆಯುವ ಮಾರ್ಗವೇ ಯೋಗಶಿಕ್ಷಣವಾಗಿದೆ. ವಿಶ್ವದಾದ್ಯಂತ ಸುಮಾರು 180ಕ್ಕೂ ಹೆಚ್ಚು ದೇಶದಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ. ಗುರುಕುಲ ಪದ್ಧತಿ, ವೇದಗಳ ಕಾಲದಲ್ಲಿ ಯೋಗ ಬೆಳೆದು ಬಂದಿದೆ ಎಂಬುದಕ್ಕೆ ಇತಿಹಾಸ ತಜ್ಞರ ವಿವರಣೆ ಲಭ್ಯ ಇವೆ ಎಂದರು.

ಅಧುನಿಕ ಶಿಕ್ಷಣ ಪದ್ಧತಿ ಒಳಗೊಂಡು ಶಾಲೆ, ಕಾಲೇಜಿನಲ್ಲಿ ಯೋಗಾಭ್ಯಾಸ ಮಾಡುವುದನ್ನು ಮರೆತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಜೀವನದ ಶಿಕ್ಷಣ ಹಾಗೂ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮನೆಂದು ಕರೆಸಿಕೊಳ್ಳಲು ಜ್ಞಾನದ ಜತೆಗೆ ಶಿಕ್ಷಣ ಅತ್ಯಂತ ಮುಖ್ಯವಾಗಿದೆ. ಯುವಜನತೆ ಮಾನಸಿಕವಾಗಿ ದೈಹಿಕವಾಗಿ ಸಬಲೀಕರಣ ಹೊಂದಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಶಿಕ್ಷಣದ ಜತೆಗೆ ಯೋಗಾಭ್ಯಾಸ ಮಾಡಿದ್ದ ಲಕ್ಷಾಂತರ ಮಂದಿ ಯೋಗದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಯೋಗ ಪದವಿಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ದಿವ್ಯ ಜ್ಯೋತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಲ್. ಕೃಷ್ಣಮೂರ್ತಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ, ದೈಹಿಕ ಬೆಳವಣಿಗೆಗೆ ಯೋಗ ಮುಖ್ಯವಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಕಷ್ಟು ಯೋಗ ಸಂಸ್ಥೆಗಳು ಸ್ಥಳೀಯವಾಗಿ ಸಾರ್ವಜನಿಕವಾಗಿ ಯೋಗಾಭ್ಯಾಸ ಶಿಬಿರ ಆಯೋಜಿಸುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಏಕಾಗ್ರತೆ ಹೊಂದಲು ಯೋಗಧ್ಯಾನ ಸಹಕಾರಿಯಾಗಿದೆ ಎಂದರು.

ಕಾಲೇಜು ಆಡಳಿತಾಧಿಕಾರಿ ಸಿ.ಎಸ್. ಪ್ರಕಾಶ್, ಪ್ರಾಂಶುಪಾಲ ಟಿ. ಮಹೇಶ್‌ಗಾಂವ್ಕರ್, ಉಪನ್ಯಾಸಕರಾದ ಆಕಾಶ್, ರಾಧಿಕಾ, ಮಮತಾ, ದಿವ್ಯಜ್ಯೋತಿ ಮೋಟಾರ್ ಸ್ಕೂಲ್ ಪ್ರಾಂಶುಪಾಲ ಗಿರೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net