

ಮೈಸೂರು: ಯೋಗಾಭ್ಯಾಸದಿಂದ ರಕ್ತ ಪರಿಚಲನೆ, ಒತ್ತಡ ಸಮತೋಲನ ಕಾಪಾಡಬಹುದಾಗಿದೆ ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಹೇಳಿದರು.
ಯೋಗ ದಿನಾಚರಣೆಯ ಅಂಗವಾಗಿ ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟದ ವತಿಯಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ದ್ವಿತೀಯ ಯೋಗ ಸಮ್ಮೇಳನದಲ್ಲಿ ಮಾತನಾಡಿದರು.
ಯೋಗ ಇದೀಗ ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಜೀವನ ಅಭ್ಯಾಸದ ಶೈಲಿಯಾಗಿ ಪರಿವರ್ತನೆಗೊಂಡಿದೆ. ಇದರಿಂದ ಆರೋಗ್ಯ ಪೂರ್ಣ ಸಮಾಜ ಸೃಷ್ಟಿಗೆ ಸಾಧ್ಯವಾಗಲಿದೆ. ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಯೋಗ ಸಂಸ್ಕೃತಿಯಾಗಿದೆ ಎಂದರು.
ಈ ಹಿಂದೆ ಯೋಗ ಎಂಬುದು ದೈಹಿಕ ಕಸರತ್ತು ಎಂದು ತಿಳಿದುಕೊಳ್ಳಲಾಗಿತ್ತು. ಆದರೆ, ಸಾವಿರಾರು ವರ್ಷಗಳ ಹಿಂದೆ ಯೋಗದ ಕುರಿತು ಅನೇಕ ಮಾಹಿತಿ ಇದ್ದರೂ ಅದರ ಅರಿವಿನ ಕೊರತೆ ಹಿನ್ನೆಲೆಯಲ್ಲಿ ಪ್ರಾಮುಖ್ಯ ದೊರೆತಿರಲಿಲ್ಲ ಎಂದರು.
ಯೋಗ ದಿನವನ್ನು 180ಕ್ಕೂ ಹೆಚ್ಚು ದೇಶದಲ್ಲಿ ಆಚರಿಸಲಾಗಿದೆ. ನಮ್ಮ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲ ಸಂಸ್ಥೆಗಳಿಗೂ ನಿರ್ದೇಶನ ನೀಡಿ ಯೋಗ ಪ್ರದರ್ಶನ ಮಾಡಲಾಯಿತು ಎಂದರು.
ಮಾದಕ ದ್ರವ್ಯಗಳ, ಮದ್ಯ ಸೇವನೆಯಿಂದ ಯುವ ಜನರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಸರಿ ದಾರಿಗೆ ತರಬೇಕಾದ ಕೆಲಸ ಮಾಡಬೇಕಿದೆ. ಆದ್ದರಿಂದ ರಾಜೀವ್ ಗಾಂಧಿ ವಿವಿ ವತಿಯಿಂದ ಡ್ರಗ್ಸ್ ಫ್ರೀ ಕ್ಯಾಂಪಸ್ ಹಮ್ಮಿಕೊಳ್ಳಲಾಗಿದೆ ಎಂದರು.
ಬ್ರಿಟಿಷರ ಆಲೋಚನೆಯಂತೆ ಇಂದಿನ ಪೀಳಿಗೆಯೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಸಾಹಿತ್ಯ, ಸಂಸ್ಕೃತಿ ಬಗ್ಗೆ ಅರಿತುಕೊಳ್ಳುತ್ತಿಲ್ಲ. ಬದಲಾಗಿ ಸಾಮಾಜಿಕ ಜಾಲ ತಾಣದಲ್ಲಿ ಶಾರ್ಟ್ ವಿಡಿಯೋ ನೋಡಿ ಕ್ಷಣ ಕಾಲಕ್ಕೆ ಬೆರೆತುಕೊಳ್ಳುತ್ತಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ನೀಡಿ, ಅಲೋಪಥಿ ಮಾತ್ರವಲ್ಲದೆ ಆಯುರ್ವೇದ ಪದ್ಧತಿಯ ಶಿಕ್ಷಣ ಒದಗಿಸಬೇಕಿದೆ ಎಂದರು.
ಸಮ್ಮೇಳನಕ್ಕೂ ಮೊದಲು ಸಮ್ಮೇಳನದ ಸರ್ವಾಧ್ಯಕ್ಷ ವೇದ ವಿಜ್ಞಾನ ಗುರುಕುಲಂನ ಅಧ್ಯಕ್ಷ ಕೋಟೆಮನೆ ಪ್ರೊ.ರಾಮಚಂದ್ರ ಜಿ.ಭಟ್ ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು. ಅವರನ್ನು ಬೆಳ್ಳಿರಥದ ಮೂಲಕ ಮಂಗಳವಾದ್ಯ, ಕಲಾತಂಡಗಳೊಂದಿಗೆ ಹಳೇ ಡಿಸಿ ಕಚೇರಿಯಿಂದ ಕಲಾಮಂದಿರವರೆಗೂ ಮೆರವಣಿಗೆ ಮೂಲಕ ಬರಮಾಡಿಕೊಂಡು ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಶಾಸಕರಾದ ಟಿ.ಎಸ್.ಶ್ರೀವತ್ಸ, ದರ್ಶನ್ ಧ್ರುವನಾರಾಯಣ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಉದ್ಯಮಿ ಕವೀಶ್‌ಗೌಡ, ಡಾ.ಲೀಲಾಪ್ರಕಾಶ್, ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಪ್ರಧಾನ ಸಂಚಾಲಕ ಎನ್.ಅನಂತು, ಉಪಾಧ್ಯಕ್ಷ ಬಿ.ಪಿ.ಮೂರ್ತಿ ಇನ್ನಿತರರಿದ್ದರು.