ಯೋಗಾಭ್ಯಾಸದಿಂದ ಮನಸ್ಸಿಗೆ ಉಲ್ಲಾಸ -ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ

IMG-20230621-WA0019.jpg
Published on

ದಾವಣಗೆರೆ: ಮನಸ್ಸು ಮತ್ತು ದೇಹದ ಸಂಪರ್ಕ ಕೊಂಡಿಯೇ ಯೋಗ. ಬಿಡುವಿನ ವೇಳೆಯನ್ನು ಯೋಗಾಭ್ಯಾಸಕ್ಕೆ ಮೀಸಲಿಟ್ಟರೆ ಮಾನಸಿಕ ಒತ್ತಡ ತಗ್ಗಲಿದೆ. ಇಡೀ ದಿನ ಉಲ್ಲಾಸ, ಉತ್ಸಾಹ ಸಿಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.

ದಾವಣಗೆರೆ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಸಿಗೆ ನೀರೆರೆಯುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ನಿವಾರಣೆಗೆ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ ಎಂದು ಹೇಳಿದರು.

ಭಾರತ, ಇಡೀ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆಯೇ ಯೋಗ. ಸುಮಾರು 6 ಸಾವಿರ ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಬಹುತೇಕ ರಾಷ್ಟ್ರಗಳು ಪ್ರತಿವರ್ಷ ಯೋಗ ದಿನದಂದು ಯೋಗ, ಧ್ಯಾನ, ಸಭೆಗಳು, ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತಿರುವುದು ಹರ್ಷದಾಯಕ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ಮಾತನಾಡಿ, ದೇಹವನ್ನು ಸರಿಪಡಿಸುವುದಷ್ಟೇ ಯೋಗದ ಗುರಿಯಲ್ಲ. ಮನಸ್ಸು, ದೇಹ ಮತ್ತು ಆತ್ಮ ಮೂರನ್ನೂ ಶುದ್ಧ್ದೀಕರಿಸಲು ನೆರವಾಗುತ್ತದೆ. ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದು ವಿವರಿಸಿದರು.

ಪ್ರಕೃತಿ ಮತ್ತು ಮನುಷ್ಯರ ನಡುವೆ ಬಾಂಧವ್ಯ ಮೂಡಿಸುವ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಉತ್ತಮ ಜೀವನಶೈಲಿ, ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಎನ್. ಶ್ರೀಪಾದ್, ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯಾನಂದ, ಎರಡನೇ ಹೆಚ್ಚುವರಿ ನ್ಯಾಯಾಧೀಶ ಪ್ರವೀಣ್‌ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪ್ಪ ಸಲಗೆರೆ, 2ನೇ ಹೆಚ್ಚುವರಿ ನ್ಯಾಯಾಧೀಶೆ ರೇಷ್ಮಾ, ಮೂರನೇ ಹೆಚ್ಚುವರಿ ನ್ಯಾಯಾಧೀಶ ಅಪ್ತಾಬ್, ಸಿವಿಲ್ ನ್ಯಾಯಾಧೀಶ ಪ್ರಶಾಂತ್, ಮಲ್ಲಿಕಾರ್ಜುನ್, ಸಿದ್ದರಾಜು, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜು ಗೋಪನಾಳು, ಕಾರ್ಯದರ್ಶಿ ಎಸ್.ಬಸವರಾಜು, ಡಾ.ಮಂದಾಕಿನಿ, ಯೋಗ ತರಬೇತುದಾರ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net