

ಚಿತ್ರದುರ್ಗ: ನಗರದ ಶಕ್ತಿದೇವತೆಗಳ ದೇಗುಲಗಳಲ್ಲಿ ಶ್ರಾವಣ ಮಾಸದ ಅಂಗವಾಗಿ ದೇವಿಯರ ಮೂರ್ತಿಗಳಿಗೆ ಮಾಸದ ಕೊನೆಯ ಶುಕ್ರವಾರ ನೋಟು, ಹಣ್ಣು, ಪುಷ್ಪಗಳು ಸೇರಿ ವಿವಿಧ ವಸ್ತುಗಳಿಂದ ವೈವಿಧ್ಯಮಯ ಅಲಂಕಾರ ಸೇವೆ ನೆರವೇರಿತು.
ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಕಾಳಿಕಮಠೇಶ್ವರಿ, ಕುಕ್ಕವಾಡೇಶ್ವರಿ, ಗೌರಸಂದ್ರ ಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ದ್ಯಾಮಲಾಂಬ, ಕೊಲ್ಲಾಪುರದ ಮಹಾಲಕ್ಷ್ಮೀ, ಮೆದೇಹಳ್ಳಿಯ ಉಮಾಮಹೇಶ್ವರಿ ದೇವಿ ಸೇರಿ ವಿವಿಧ ದೇಗುಲಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ನೈವೇದ್ಯ, ಅಲಂಕಾರ ಸೇವೆ ಸೇರಿ ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ಬರಗೇರಮ್ಮನಿಗೆ ಮಹಾಲಕ್ಷ್ಮೀ ರೂಪ: ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ 20, 50, 500 ರೂ. ಮುಖಬೆಲೆಯ ನೂರಾರು ನೋಟುಗಳು, ಬಂಗಾರ ವರ್ಣದ 5 ರೂ.ನ ಸಾವಿರಾರು ನಾಣ್ಯಗಳಿಂದ ಮಹಾಲಕ್ಷ್ಮೀ ದೇವಿ ಮಾದರಿಯಲ್ಲಿ ವಿಶೇಷವಾಗಿ ಅಲಂಕರಿಸಲಾಗಿತ್ತು.
ಮೊದಲ ಪೂಜೆ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು. ಏಕನಾಥೇಶ್ವರಿ ದೇವಿ ದೇಗುಲ ಹೊರತುಪಡಿಸಿ ವಿವಿಧ ದೇಗುಲಗಳಲ್ಲಿ ಬೆಳಗ್ಗೆಯಿಂದ ರಾತ್ರಿ 9.30ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯರ ನಾನಾ ಮಾದರಿಯ ಅಲಂಕಾರ ಕಣ್ತುಂಬಿಕೊಂಡರು. ಇಷ್ಟಾರ್ಥ ಸಿದ್ಧಿಗಾಗಿ ಅನೇಕರು ಪ್ರಾರ್ಥಿಸಿಕೊಂಡರು. ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.
ನಗರ ಸೇರಿ ಜಿಲ್ಲಾದ್ಯಂತ 'ಶುಕ್ರಗೌರಿ' ವ್ರತಾಚರಣೆಯನ್ನು ಮಾಸದ ನಾಲ್ಕನೇ ಶುಕ್ರವಾರವೂ ಅನೇಕ ಮಹಿಳೆಯರು ಶ್ರದ್ಧಾ-ಭಕ್ತಿಯಿಂದ ಆಚರಿಸಿ, ಸಂಪನ್ನಗೊಳಿಸಿದರು.
ವ್ರತಾಚರಣೆ ಅಂಗವಾಗಿ ದೇವರ ಕೋಣೆಗಳು ಶುಚಿಗೊಂಡಿದ್ದವು. ಸರ್ವಮಂಗಳೆ, ಶಕ್ತಿಸ್ವರೂಪಿಣಿ, ಪರಶಿವನ ಸತಿ ಪಾರ್ವತಿ ದೇವಿ ಸ್ವರೂಪಿಣಿಯಾದ ಶುಕ್ರಗೌರಿ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿದರು. ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರನ್ನು ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬಿದರು. ಮಹಿಳಾ ಭಕ್ತರು ಭಕ್ತಿಯಲ್ಲಿ ಮಿಂದೆದ್ದು, ಸಂಭ್ರಮಿಸಿದರು.