

ಚಾಮರಾಜನಗರ: ಭಾರತದ ಪ್ರಾಚೀನ ಪರಂಪರೆಯ ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ರೋಗ ಮುಕ್ತ ಜಗತ್ತನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಆದರ್ಶ ವಿದ್ಯಾಲಯದ ಪ್ರಭಾರ ಮುಖ್ಯ ಶಿಕ್ಷಕ ಅರ್ಕಪ್ಪ ಹೇಳಿದರು.
ತಾಲೂಕಿನ ಮಲ್ಲಯ್ಯನಪುರ ಸಮೀಪದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತವು ವಿವಿಧ ಸಂಸ್ಕೃತಿಗಳ ಆಗರ, ಜಗತ್ತಿನ ಸಂಸ್ಕೃತಿಗಳಲ್ಲಿ ಭಾರತದ ಸಂಸ್ಕೃತಿ ಶ್ರೀಮಂತವಾಗಿದೆ. ಇಂತಹ ದೇಶ ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿಕೊಟ್ಟಿದೆ. ರೋಗಮುಕ್ತ ಜಗತ್ತು ಕಟ್ಟುವ ಕೈಂಕರ್ಯಕ್ಕೆ ಯೋಗಾಭ್ಯಾಸ ಸಹಕಾರಿಯಾಗಲಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಸರ್ವರೂ ಯೋಗವನ್ನು ಹಾಗೂ ಯೋಗದ ಪ್ರತಿಯೊಂದು ಆಸನಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ, ಬದುಕಿನ ಸತ್ಯವನ್ನು ಅರಿಯಬಹುದು. ಯೋಗವು ರೋಗಮುಕ್ತ ಸಮಾಜವನ್ನು ನಿರ್ಮಾಣ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಬದುಕಿನ ಕೊನೆಯ ಹಂತದವರೆಗೂ ಯೋಗವನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಯೋಗದಿನದ ಆಚರಣೆಗೆ ಮಹತ್ವ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ರಂಜಿನಿ, ಸದಸ್ಯರಾದ ಮಹೇಂದ್ರ, ಮಲ್ಲೇಶ್ ಗೌಡ, ಶಿಕ್ಷಕರಾದ ಬಸವಣ್ಣ, ಸಂತೋಷ್ ಕುಮಾರ್, ಶಿವಕುಮಾರ್, ನಂಜುಂಡಸ್ವಾಮಿ, ಸುರೇಶ್, ಶಾಲಿನಿ, ಲೀಲಾ, ಅಸೀಯ ಪರ್ವೀನ್ ಹಾಗೂ ಇತರರು ಹಾಜರಿದ್ದರು.