

ವಿಜಯವಾಣಿ ಸುದ್ದಿಜಾಲ ಧಾರವಾಡ
ಯೋಗ ದಿನಾಚರಣೆ ನಿಮಿತ್ತ ನಗರದ ರಾಯಾಪುರದ ಕೆಎಸ್‌ಆರ್‌ಪಿ 10 ಬೆಟಾಲಿಯನ್ ಉಪ ಘಟಕದಲ್ಲಿ ಮಹಾಂತ ಕಾಲೇಜಿನ ಐಕ್ಯೂಎಸಿ, ಎನ್‌ಎಸ್‌ಎಸ್ ಹಾಗೂ ಕಾಲೇಜಿನ ಒಕ್ಕೂಟದ ಆಶ್ರಯದಲ್ಲಿ ಪೊಲೀಸ್ ಸಿಬ್ಬಂದಿಗೆ ಯೋಗ ತರಬೇತಿ ಶಿಬಿರ ನಡೆಸಲಾಯಿತು.
ಕೆಎಸ್‌ಆರ್‌ಪಿಯ ಸಹಾಯಕ ಕಮಾಂಡಂಟ್ ವಿಶ್ವನಾಥ ನಾಯಕ ಶಿಬಿರ ಉದ್ಘಾಟಿಸಿ ಮಾತನಾಡಿ, ಯೋಗ ಇಂದು ಎಲ್ಲರ ಅವಶ್ಯಕತೆ. ನಿತ್ಯದ ಜೀವನದಲ್ಲಿ ಯೋಗ ಅಳವಡಿಸಿಕೊಂಡು ದೈಹಿಕ, ಮಾನಸಿಕವಾಗಿ ಸದೃಢರಾಗಬೇಕು. ಯೋಗದಿಂದ ರೋಗಮುಕ್ತ ಜೀವನಶೈಲಿ ತಮ್ಮದಾಗಲಿ ಎಂದರು.
ಸುರೇಶ ಡಂಬೆ ಮಾತನಾಡಿ, ಈ ವರ್ಷದ ಯೋಗ ದಿನಾಚರಣೆ ಧ್ಯೇಯವಾಕ್ಯ ವಸುದೈವ ಕುಟುಂಬಕಂ. ಆ ಕುಟುಂಬದ ಸ್ವಾಸ್ಥಕ್ಕಾಗಿ ಯೋಗ ನಮ್ಮೆಲ್ಲರ ಮೊದಲ ಆದ್ಯತೆಯಾಗಲಿ. ರೋಗಮುಕ್ತ ಸಮಾಜ ನಿರ್ಮಿಸಲು ಯೋಗದ ಮೂಲಕ ಎಲ್ಲರೂ ಸಜ್ಜಾಗಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಶಾಂತಯ್ಯ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಯೋಗ ಪಟುಗಳಾದ ಸಂದೀಪ ಎನ್. ಹಾಗೂ ಸುರೇಖಾ ಹುಡೇದ ಯೋಗ ತರಬೇತಿ ನೀಡಿದರು. ಎಸ್. ಮಾರುತಿ, ಸಿ.ಕೆ. ಹುಬ್ಬಳ್ಳಿ, ಜೆ.ಸಿ. ಕಡ್ಡಿಪುಡಿ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.