

ಲಕ್ಷ್ಮೇಶ್ವರ: ನಿತ್ಯ ಜೀವನದಲ್ಲಿ ಯೋಗ ರೂಢಿಸಿಕೊಳ್ಳಲು ವಯಸ್ಸಿನ ಮಿತಿಯಿಲ್ಲ. ಎಲ್ಲರೂ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಯೋಗಸಾಧಕಿ ವೀಣಾ ಹತ್ತಿಕಾಳ ಹೇಳಿದರು.
ಪಟ್ಟಣದ ಜಿ.ಎಫ್.ಉಪನಾಳ ಪ್ರತಿಷ್ಠಾನದ ಶಾಂತಿಧಾಮ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯೋಗ ಮಾಡಲು ಆಗುವುದಿಲ್ಲ ಎನ್ನುವ ಭಾವನೆ ಯಾರಲ್ಲೂ ಬರಬಾರದು. ಎಲ್ಲರೂ ಸರಳವಾಗಿ ನಿತ್ಯ ಯೋಗಾಸನ ಮಾಡುತ್ತಾ ಹೋದರೆ ಎಲ್ಲರಂತೆ ಯೋಗ ಮಾಡಬಹುದಾಗಿದೆ. ಯೋಗದಿಂದ ಅನೇಕ ರೋಗಗಳು ವಾಸಿಯಾಗುತ್ತವೆ. ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನಿರೋಗಿಗಳಾಗಿ ಬದುಕಬೇಕು ಎಂದರು.
ಯೋಗ ಸಾಧಕಿ ಶಿವಲೀಲಾ ಚೆಕ್ಕಿ ಮಾತನಾಡಿ, ವೃದ್ಧಾಶ್ರಮದಲ್ಲಿರುವ ಎಲ್ಲರೂ ಉತ್ಸಾಹದಿಂದ ಯೋಗ ಶಿಬಿರದಲ್ಲಿ ಪಾಲ್ಗೊಂಡು ಭಜನೆ, ಪ್ರಾಣಾಯಾಮಗಳನ್ನು ಸರಿಯಾಗಿ ಮಾಡುತ್ತಿರುವುದರಿಂದ ಅನೇಕರಿಗೆ ಹಲವಾರು ಪ್ರಯೋಜನಗಳಾಗಿವೆ ಎಂದರು.
ಡಿ.ಎಂ. ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಯೋಗ ಸಾಧಕರಾದ ಪ್ರಕಾಶ ಹುಲಬಜಾರ, ಪುಷ್ಪಾ ಪೆರಡೂರ, ನಂದಾ ಮಾಳವಾಡ, ರೂಪಾ ಸಂತಿ, ಗೀತಾ ಹುಲಬಜಾರ, ನಂದಾ ಧರ್ಮಾಯತ, ವಸತಿ ನಿಲಯಪಾಲಕಿ ಸುನಿತಾ ಜಿ., ಕಾರ್ಯಕ್ರಮ ನಿರೂಪಿಸಿದರು.