

ಹಾಸನ : ಯೋಗಾಸನದಿಂದ ಶಾರೀರಿಕ ದೃಢತೆ ಹೆಚ್ಚಾಗಿ ಮಾನಸಿಕ ಸುಖ ಪ್ರಾಪ್ತಿಯಾಗುತ್ತದೆ ಎಂದು ಅಡಗೂರು ಯೋಗ ಚೇತನ ಕೇಂದ್ರದ ಚೇತನ್ ಗುರೂಜಿ ತಿಳಿಸಿದರು.
ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ರಾಜಮ್ಮ ಚನ್ನಮಲಪ್ಪ ಸ್ಮರಣಾರ್ಥ ಉಚಿತ ಯೋಗ ಶಿಬಿರದಲ್ಲಿ ಮಾತನಾಡಿದರು.
ಹೊಟ್ಟೆ, ಸೊಂಟದ ಬೊಜ್ಜು ಕರಗಿಸಲು ನಿತ್ಯ ಯೋಗಾಸನ ಅಗತ್ಯ. ಬೊಜ್ಜು ಕರಗಿಸಿ ಮೈ ತೆಳ್ಳಗಾಗುವುದರಿಂದ ಮೂತ್ರದೋಷ ನಿಯಂತ್ರಣ, ಜೀರ್ಣಶಕ್ತಿ ಹೆಚ್ಚಾಗಿ ತಾರುಣ್ಯ ಭಾವದಿಂದ ಮಧುಮೇಹ, ಬಿಪಿ ನಿಯಂತ್ರಣಕ್ಕೆ ಬರುತ್ತದೆ.
ಆದಷ್ಟು ಸಿರಿಧಾನ್ಯದ ಸಹಜ ಆಹಾರ ಸೇವಿಸಿ ಕಡಿಮೆ ಖರ್ಚಿನ ಸಾವಯವ ಕೃಷಿ ಮಾಡಿ ನೈಜತನದ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್ ಮಾತನಾಡಿ, ಚೇತನ್ ಗುರೂಜಿ ಅವರು 350 ಯೋಗ ಶಿಬಿರಗಳಿಗೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ 86 ಬಾರಿ ಸ್ವ- ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. ಅಡಗೂರು ಸರ್ಕಾರಿ ಪ್ರಾಥಮಿಕ ಪಾಠಶಾಲೆಯನ್ನು ಮಾದರಿ ಶಾಲೆ ಮಾಡಲು ಸಹಕಾರ ನೀಡುತ್ತಿರುವುದನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್. ಪ್ರಕಾಶ್, ಎನ್.ಸಿ. ವಿಶ್ವನಾಥ್, ರಾಜೇಶ್ವರಿ, ಸಿ.ಬಿ. ಶಂಕರ್, ಬಸವರಾಜ್, ಮೆಡಿಕಲ್ ಪವಿತ್ರಾ ಸಂತೋಷ್, ಕಂಡಕ್ಟರ್ ಶಂಕರ್, ಬೆಟ್ಟಯ್ಯ, ಅಪ್ಪಾಜಿ, ಎಮ್. ಬಿ. ದಿನೇಶ್, ಗೌತಮ್, ಛಾಯಾ ಕೃಷ್ಣಮೂರ್ತಿ, ಶಕುಂತಲಾ ನಾಗರಾಜ್, ರಾಜಣ್ಣ, ತರಕಾರಿ ಕುಮಾರ್, ಜಿತೇಂದ್ರ ಇತರರು ಹಾಜರಿದ್ದರು.