

ನಾಗಮಂಗಲ: ಮನುಷ್ಯನ ದೇಹ, ಮನಸ್ಸು ಸದೃಢವಿರಲು ಯೋಗ ಸಹಕಾರಿ ಎಂದು ತಹಸೀಲ್ದಾರ್ ಆದರ್ಶ್ ಅಭಿಪ್ರಾಯಪಟ್ಟರು.
ಪಟ್ಟಣ ಹೊರವಲಯದಲ್ಲಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ನೂರನೇ ದಿನದ ಕೌಂಟ್‌ಡೌನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದೃಢ ದೇಹದಲ್ಲಿ ಮಾತ್ರವೇ ಸದೃಢ ಮನಸ್ಸು ಇರುತ್ತದೆ. ದೇಶದಲ್ಲಿ ಸಕ್ಕರೆ ಕಾಯಿಲೆ ಮತ್ತು ಸ್ತೂಲ ಕಾಯದ ಸಮಸ್ಯೆ ಹೆಚ್ಚಾಗುತ್ತಿದ್ದು, ಯೋಗವೇ ಉತ್ತಮ ಪರಿಹಾರವಾಗಿದೆ. ಆರೋಗ್ಯದ ರಕ್ಷಣೆ ಮಾಡುವ ನಿಟ್ಟಿನಲ್ಲಿ ಯೋಗ ಸಹಕಾರಿ. ಯುವ ಜನತೆಯು ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಂಡು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ಯೋಗಪಟು ನಂಜೇಗೌಡ ಮಾತನಾಡಿ, ದೇಹಕ್ಕೆ ವಯಸ್ಸಾದರೂ ಮನುಷ್ಯ ಮನೋಬಲದಿಂದ ಮುಂದುವರಿದರೆ ಎಂಥ ಕೆಲಸವನ್ನು ಬೇಕಾದರೂ ಸಾಧಿಸಬಹುದು. ಮನುಷ್ಯನಿಗೆ ಮನೋಬಲಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ವಯೋಸಹಜವಾಗಿ ದೈಹಿಕ ದೌರ್ಬಲ್ಯ ಉಂಟಾಗುತ್ತದೆ. ಅಂತ ಸಮಯದಲ್ಲಿ ಯೋಗದ ಅಭ್ಯಾಸದಿಂದ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಾಧ್ತವಾಗುತ್ತದೆ. ಪ್ರತಿಯೊಬ್ಬರೂ ಯೋಗವನ್ನು ಕಲಿಯುವುದು ಅವಶ್ಯ. ಯೋಗ ಬಲ್ಲವರಿಗೆ ರೋಗವಿಲ್ಲ ಎಂಬ ಮಾತು ಸತ್ಯವಾಗಿದೆ. ಯೋಗದಿಂದ ಮನಸ್ಸು ಉಲ್ಲಾಸಿತವಾಗಿರುತ್ತದೆ ಎಂದರು.
ಸ್ವಾಸ್ಥ್ಯ ಮಾರ್ಗ ಯೋಗ ಪ್ರತಿಷ್ಠಾನದ ಸ್ಥಾಪಕ ಲಕ್ಷ್ಮಣ್‌ಜೀ ಮಾತನಾಡಿ, ಯೋಗಾಭ್ಯಾಸವು ಎಂದಿಗೂ ಒತ್ತಾಯವಾಗಬಾರದು. ಯಾರೇ ಆಗಲಿ ಯೋಗವನ್ನು ಸ್ವಯಂ ಆಸಕ್ತಿಯಾಗಿಸಿಕೊಳ್ಳಬೇಕು. ದೇಶವು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದ್ದರೂ ರೋಗಗಳ ಸಂಖ್ಯೆಯೂ ಹೆಚ್ಚಾಗಿದೆ. ಮನುಷ್ಯ ಆಧುನಿಕತೆಯ ಹಿಂದೆ ಬಿದ್ದು ಜೀವನ ಶೈಲಿಯನ್ನು ಮಾರ್ಪಾಡು ಮಾಡಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ. ಪ್ರಧಾನಿ ಅವರೂ ಕೂಡ ದೇಶದ ಜನರ ಆರೋಗ್ಯದ ಮೇಲೆ ಹೆಚ್ಚಿನ ಗಮನಹಿಸುವ ಮೂಲಕ ಜನರಿಗೆ ಆರೋಗ್ಯದ ರಕ್ಷಣೆಗೆ ಕರೆ ಕೊಡುತ್ತಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ 450 ಕ್ಕೂ ಹೆಚ್ಚು ಯೋಗಾಸಕ್ತರು ಭಾಗಹಿಸಿ ಯೋಗಾಭ್ಯಾಸ ಮಾಡಿದರು. ನಂತರ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಕೇಂದ್ರದ ನೋಡಲ್ ಅಧಿಕಾರಿ ವಾದಿರಾಜ್, ಕನ್ನಡ ಸಂಘದ ಅಧ್ಯಕ್ಷೆ ಪುಟ್ಟಮ್ಮಮಾಯಣ್ಣಗೌಡ, ಡಾ.ನಿತೇಶ್, ಡಾ.ನೂಜ್ಹತ್, ಡಾ.ಸಿಂಧುಶ್ರೀ, ಡಾ.ಕಾರ್ತಿಕ್, ಡಾ.ಪೂಜಾ, ಡಾ.ರಘುರಾಂ, ಯೋಗ ತರಬೇತುದಾರ ಸಿದ್ದಪ್ಪ ನರಗಟ್ಟಿ, ಇಂಜಿನಿಯರ್ ನಾಗೇಶ್, ಕಚೇರಿ ಸಹಾಯಕರಾದ ಚೈತ್ರಾ, ಪ್ರಗತಿ, ಶಿವರಾಜು, ಯಶ್ವಂತ್ ಸೇರಿದಂತೆ ನೂರಾರು ಯೋಗಪಟುಗಳು ಭಾಗವಹಿಸಿದ್ದರು.
============
20 ಎನ್‌ಎಂಜಿ 01: ನಾಗಮಂಗಲ ಪಟ್ಟಣದ ಹೊರವಲಯದಲ್ಲಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ನೂರನೇ ದಿನದ ಕೌನ್‌ಡೌನ್ ಕಾರ್ಯಕ್ರಮವನ್ನು ತಹಸೀಲ್ದಾರ್ ಆದರ್ಶ್ ಉದ್ಘಾಟಿಸಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.
==========