

ಬೀದರ್: ಯೋಗ ಹಾಗೂ ಧ್ಯಾನದಿಂದ ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಬಹುದು ಎಂದು ಶಿವಯೋಗಿ ಮಚ್ಚೇಂದ್ರನಾಥ ಸ್ವಾಮೀಜಿ ಹೇಳಿದರು.
ನಗರದ ರಾಮನಗರದ ಸಿದ್ದರಾಮಯ್ಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಯೋಗ, ಧ್ಯಾನ ಮಾಡಬೇಕು. ಜೀವನದಲ್ಲಿ ಉತ್ತುಂಗಕ್ಕೆ ಏರಲು ನಿರಂತರ ಪರಿಶ್ರಮ ಪಡಬೇಕು ಎಂದು ಕಿವಿಮಾತು ಹೇಳಿದರು.
ತಂದೆ-ತಾಯಿ ಮಕ್ಕಳ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಕಾರಣ, ಮಕ್ಕಳು ಅವುಗಳನ್ನು ಹುಸಿಗೊಳಿಸಬಾರದು. ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ. ಕೃಷ್ಣಪ್ಪ ನುಡಿದರು.
ಸಿದ್ದರಾಮಯ್ಯ ಐಟಿಐ ಕಾಲೇಜು ಅತ್ಯುತ್ತಮ ಎಲೆಕ್ಟ್ರಿಕಲ್ ಹಾಗೂ ಫಿಟ್ಟರ್ ವರ್ಕಶಾಪ್‍ಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ ಹೇಳಿದರು.
ಬಡತನದ ಮಧ್ಯೆಯೇ ಅನೇಕರು ಮಹತ್ವದ ಸಾಧನೆ ಮಾಡಿದ ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಛಲ, ಆತ್ಮವಿಶ್ವಾಸವಿದ್ದರೆ ವಿದ್ಯಾರ್ಥಿಗಳು ಏನನ್ನು ಬೇಕಾದರೂ ಸಾಧಿಸಬಹುದು ಎಂದು ಅಧ್ಯಕ್ಷತೆ ವಹಿಸಿದ್ದ ಅಹಿಲ್ಯಾಬಾಯಿ ಮಹಿಳಾ ವಿಕಾಸ ಕಾರ್ಯ ಸಮಿತಿಯ ಅಧ್ಯಕ್ಷ ಪಂಡಿತರಾವ್ ಚಿದ್ರಿ ತಿಳಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೀತಾ ಚಿದ್ರಿ, ಕಾಲೇಜಿನ ಉಪನ್ಯಾಸಕರು ಇದ್ದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.