

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೋವಿಡ್ ಬಳಿಕ ವಿದ್ಯಾರ್ಥಿಗಳು ಮೋಬೈಲ್ ದಾಸರಾಗಿದ್ದಾರೆ. ವಿದ್ಯಾಭ್ಯಾಸದ ಕಡೆಗೆ ಗಮನ ಕಡಿಮೆಯಾಗಿದ್ದು, ಅಭ್ಯಾಸದ ಸಮಯ ಕಡಿತವಾಗಿದೆ. ಈ ದುರಭ್ಯಾಸ ಹೋಗಲಾಡಿಸಲು ವಿದ್ಯಾರ್ಥಿಗಳು ಬೆಳಗ್ಗೆ ಸೂರ್ಯ ನಮಸ್ಕಾರ, ಯೋಗಾಸನದಂತ ಒಳ್ಳೆ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ ಹೇಳಿದರು.
ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಹಿರಿಯ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೌಶಲಾಭಿವೃದ್ಧಿ ಇಲಾಖೆಯಿಂದ ಮೂರು ಮತ್ತು ಆರು ತಿಂಗಳ ಕಡಿಮೆ ಅವಧಿಯ ಕೋರ್ಸ್‌ಗಳ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಗೌರವ ಕಾರ್ಯದರ್ಶಿ ಚಂದ್ರಕಾಂತ ಮಟ್ಟಿ ಮಾತನಾಡಿ, ಭಾರತದಲ್ಲಿ ಕೈಗಾರಿಕಾ ಕ್ರಾಂತಿ ಆಗುತ್ತಿದ್ದು, ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಬಹು ಬೇಡಿಕೆ ಬಂದಿದೆ. ವಿದ್ಯಾರ್ಥಿಗಳು ವಿದೇಶಕ್ಕೆ ಹೋಗದೆ ಸ್ವದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಸಂಸ್ಥೆ ಜಂಟಿ ಕಾರ್ಯದರ್ಶಿ ಎಸ್.ಎಂ.ಅಗಡಿ, ಆಡಳಿತ ಮಂಡಳಿ ಸದಸ್ಯ ಬಸವರಾಜ ತಾಳಿಕೋಟಿ,ವಿದ್ಯಾರ್ಥಿಗಳು, ಸಂಸ್ಥೆ ಪದಾಧಿಕಾರಿಗಳು, ಇತರರು ಇದ್ದರು. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯ ಎಸ್.ಎಂ.ಬಮ್ಮನಗೌಡರ ಸ್ವಾಗತಿಸಿದರು. ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಎನ್.ಚಾಕಲಬ್ಬಿ ವಂದಿಸಿದರು.