ಯೋಗದಿಂದ ಆರೋಗ್ಯ ಸುಧಾರಣೆ

3ss1yogabhyasa
Published on

ಶನಿವಾರಸಂತೆ: ಯೋಗಾಭ್ಯಾಸದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಯೋಗ ಮಾಡುವುದರಿಂದ ಮಾನಸಿಕ ಒತ್ತಡ ದೂರವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಯೋಗಭ್ಯಾಸ ಮಾಡುವ ಮೂಲಕ ಕ್ರಿಯಾಶೀಲರಾಗಿ ತರಗತಿಗೆ ಬಂದು ಪಠ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಸೋಮವಾರಪೇಟೆ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪಿ.ಜಿ. ಅರಣ್ ಸಲಹೆ ನೀಡಿದರು.

ಕೊಡಗು ಜಿಲ್ಲಾ ಆಯುಷ್ ಇಲಾಖೆ ಮತ್ತು ಸೋಮವಾರಪೇಟೆ ಆಯುಷ್ ವಿಭಾಗದ ವತಿಯಿಂದ ಸಮೀಪದ ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯೋಗದ ಮಹತ್ವ ಮತ್ತು ಸಾಮೂಹಿಕ ಯೋಗಾಭ್ಯಾಸ ಹಾಗೂ ಹದಿಹರೆಯದ ಸಮಸ್ಯೆ ಮತ್ತು ಪರಿಹಾರ ಕುರಿತ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಮತ್ತು ಆಯುಷ್ ಇಲಾಖೆ ಮೂಲಕ ಆಯುಷ್ ಸೇವಾ ಗ್ರಾಮ ಯೋಜನೆಯಡಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ, ಧ್ಯಾನದ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.

ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆ ಮತ್ತು ಪರಿಹಾರ ಕುರಿತು ಸೋಮವಾರಪೇಟೆ ಆಯುಷ್ ಆಸ್ಪತ್ರೆ ವೈದ್ಯೆ ಕೆ.ಎಸ್. ಶ್ವೇತಾ ಮಾಹಿತಿ ನೀಡಿದರು. ವಸತಿ ಶಾಲೆಯ ಪ್ರಾಂಶುಪಾಲೆ ಕೆ.ಎನ್. ಭಾರತಿ, ದೈಹಿಕ ಶಿಕ್ಷಣ ಶಿಕ್ಷಕ ವಿ. ಅಲೋಕ್, ಶಿಕ್ಷಕಿ ಪೂರ್ಣಿಮಾ, ಆಯುಷ್ ಇಲಾಖೆ ಸಿಬ್ಬಂದಿ ರವಿಕುಮಾರ್, ಚರಣ್, ಆಯುಷ್ ಯೋಗ ಶಿಕ್ಷಕ ಕೌಶಿಕ್ ಬೆಂಗಳೂರು, ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net