

ಹರಪನಹಳ್ಳಿ: ದೇಹ ಹಾಗೂ ಮನಸ್ಸಿನ ಬಲವರ್ಧನೆಗೆ ಯೋಗ ಸಾಧನವಾಗಿದೆ. ಜೀವನದ ಜಂಜಾಟಗಳ ನಡುವೆಯೇ ಯೋಗ-ಧ್ಯಾನದ ಬಗ್ಗೆ ಗಮನಹರಿಸಿ ಎಂದು ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಸಲಹೆ ನೀಡಿದರು.
ಪಟ್ಟಣದ ಬಸಮ್ಮ ಕಲಾಮಂದಿರದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಏರ್ಪಡಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಶತಮಾನಗಳ ಪುರಾತನ ಯೋಗ ದೇಶ-ವಿದೇಶಗಳಲ್ಲಿ ಹರಡಿದೆ. ಭಾರತೀಯ ಮೂಲದ ಯೋಗದ ಮಹತ್ವವನ್ನು ವಿದೇಶಿಯರು ಅರ್ಥ ಮಾಡಿಕೊಂಡು ಅನುಸರಿಸುತ್ತಿದ್ದಾರೆ ಎಂದರು.
ನಿವೃತ್ತ ಶಿಕ್ಷಕಿ ಶಕುಂತಲಾ ಕೇಲೂರು ಮಾತನಾಡಿ, ಯೋಗ ಎಂಟು ಅಂಗಗಳನ್ನು ಒಳಗೊಂಡಿರುವ ಸಮಗ್ರ ಅಭ್ಯಾಸವಾಗಿದೆ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಸಾಧಿಸಲು ಸಹಾಯ ಮಾಡುತ್ತದೆ. ನಮ್ಮ ಅನಾರೋಗ್ಯಕ್ಕೆ ಕಾರಣ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವುದು ಕಾರಣವಾಗಿದೆ ಎಂದು ತಿಳಿಸಿದರು.
ಡಾ.ವಿನಯ ಬೇಂದ್ರೆ ಮಾತನಾಡಿ, ನಿತ್ಯ ಜೀವನದಲ್ಲಿ ಒಂದು ತಾಸು ಯೋಗ-ಪ್ರಾಣಾಯಾಮ ಮಾಡಿದರೆ ಬಿಪಿ, ಸಕ್ಕರೆ ಕಾಯಿಲೆ, ಥೈರಾಯ್ಡ, ತಲೆನೋವು, ಹೃದಯಾಘಾತ, ಸೊಂಟ ನೋವು, ಅಜೀರ್ಣ, ದೃಷ್ಟಿ ಸಮಸ್ಯೆ ನಿವಾರಣೆಯಾಗಲಿವೆ ಎಂದರು. ಬಿ.ಸುದರ್ಶನ್, ಕೆ.ಅರವಿಂದ ಶೆಟ್ಟಿ ಯೋಗ ತರಬೇತಿ ನೀಡಿದರು.