

ಚಿಕ್ಕಮಗಳೂರು: ಮಕ್ಕಳಿಗೆ ಯೋಗ ಕಲಿಸುವ ಜೊತೆಗೆ ಹಲ್ಲುಗಳ ತೊಂದರೆ ನಿವಾರಣೆಗೆ ಡೆಂಟಲ್ ಥೆರಪಿ ಮೂಲಕ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೇಸಿಗೆ ಶಿಬಿರವನ್ನು ೧೪ ರಿಂದ ೧೬ ವರ್ಷದ ಮಕ್ಕಳಿಗೆ ಮೇ. ೬ರಿಂದ ೧೦ರವರೆಗೂ ಹಾಗೂ ೧೮ ವರ್ಷ ಮೇಲ್ಪಟ್ಟವರಿಗೆ ಮೇ ೧೨ರಿಂದ ೧೬ ರವರೆಗೆ ನಗರದ ಬಸವನಹಳ್ಳಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರೀಸ್ ವಿಶ್ವವಿದ್ಯಾಲಯದ ಜ್ಞಾನ ಪ್ರಕಾಶ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯೋಗ ತರಬೇತುದಾರ ಡಾ.ಬಾಸ್ಕರ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗ ಇಂದು ವಿಶ್ವಮಾನ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯ ಪೂರ್ಣ ಜೀವನಕ್ಕೆ ಯೋಗ ಅವಿಭಾಜ್ಯ ಅಂಗವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯೋಗ ಕಲಿಸಿಕೊಡುವ ಸಲುವಾಗಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಮೇ ೬ ರಿಂದ ೧೦ರವರೆಗೆ ಯೋಗ ಕಲಿಸಿಕೊಡಲಾಗುವುದು. ಹಾಗೇಯೇ ೧೦ ವರ್ಷ ಮೇಲ್ಪಟ್ಟವರಿಗೆ ಮೇ ೧೨ರಿಂದ ೧೬ರವರೆಗೆ ಯೋಗ ಶಿಕ್ಷಣ ಹೇಳಿಕೊಡಲಾಗುವುದು. ಶಿಬಿರದಲ್ಲಿ ಹಲ್ಲಿನ ಸಮಸ್ಯೆ ಇದ್ದವರಿಗೆ ೧೬ ತರಹದ ದಂತ ಥೆರಪಿಯನ್ನು ಹೇಳಿಕೊಡಲಾಗುವುದು. ಇದು ಮಧುಮೇಹ ಮತ್ತು ಅಸ್ತಮಾ ಇದ್ದವರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಹಿಮಾತಾರಕ ಯೋಗಾಸನದ ಒಂದು ಭಾಗವಾಗಿದ್ದು, ದೂರದೃಷ್ಟಿ ಮತ್ತು ಸಮೀಪ ದೃಷ್ಟಿದೋಷ ಇದ್ದವರಿಗೆ ಅನುಕೂಲವಾಗಲಿದೆ. ಹಿಮಾಥೆರಪಿಯಿಂದ ವೈರಲ್ ಜ್ವರ ಬಾರದಂತೆ ತಡೆಗಟ್ಟಬಹುದು. ಯೋಗದ ಜತೆಗೆ ಧ್ಯಾನ, ರಾಜಯೋಗ ಸೇರಿದಂತೆ ಇತರೆ ಆಸನಗಳನ್ನು ಮಕ್ಕಳಿಗೆ ಹೇಳಿಕೊಡಲಾಗುವುದು ಎಂದರು.
ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಸತಿ ಹಾಗೂ ಪೌಷ್ಠಿಕಯುಕ್ತ ಆಹಾರವನ್ನು ನೀಡಲಾಗುವುದು. ಪ್ರವೇಶಾತಿಗೆ ಶುಲ್ಕ ವಿಧಿಸಿದ್ದು, ೧೪ ರಿಂದ ೧೬ ವರ್ಷದ ಮಕ್ಕಳಿಗೆ ಮೂರು ಸಾವಿರ ರೂ. ಹಾಗೂ ೧೮ ವರ್ಷ ಮೇಲ್ಪಟ್ಟವರಿಗೆ ಆರು ಸಾವಿರ ರೂ. ನಿಗಧಿಪಡಿಸಲಾಗಿದೆ. ನೋಂದಣಿ ಬಯಸುವವರು ೮೧೯೭೭೨೬೩೩೪, ೬೩೬೦೪೨೦೧೪೧ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಗಂಗಾಧರ್ ಉಪಸ್ಥಿತರಿದ್ದರು.