ಯೋಗ ಸಂಭ್ರಮಕ್ಕೆ ಕರೊನಾ ಕಾಟ

21-klr-9 klr mp
Published on

ಕೋಲಾರ: ಯೋಗ ಕಲಿಕೆ ಜಾತಿ, ಧರ್ಮಕ್ಕೆ ಸೀಮಿತವಲ್ಲ, ಆರೋಗ್ಯಕ್ಕಾಗಿ ಯಾರು ಬೇಕಾದರೂ ಅಭ್ಯಾಸ ಮಾಡಬಹುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲು ಕರೊನಾ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಆಪ್ತರೊಂದಿಗೆ ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿ ಯೋಗಭ್ಯಾಸಕ್ಕೆ ಚಾಲನೆ ನೀಡಿ, ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮದಿಂದ ಯೋಗಕ್ಕೆ ಅತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ, 150 ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಯೋಗ ದಿನ ಆಚರಿಸಲಾಗುತ್ತಿದೆ ಎಂದರು.

ಪ್ರಾರಂಭದಲ್ಲಿ ಕೆಲವರು ಯೋಗವನ್ನು ವಿರೋಧಿಸುತ್ತಿದ್ದರು, ಈಗ ಅವರೇ ಯೋಗ ಕಲಿತು ಆರೋಗ್ಯದ ಕಡೆ ಕಾಳಜಿ ತೋರುತ್ತಿದ್ದಾರೆ ಎಂದರು. ಕರೊನಾ ಹಾವಳಿ ಇಲ್ಲದಿದ್ದರೆ ಯೋಗ ಹಬ್ಬವನ್ನು ಅದ್ದೂರಿಯಾಗಿ ಆಚರಿಸಬಹುದಿತ್ತು, ಬಹುತೇಕ ಕಡೆ ಆನ್‌ಲೈನ್ ಮೂಲಕ ಆಚರಿಸಲಾಗುತ್ತಿದ್ದು, ಶಿಬಿರಾರ್ಥಿಗಳು ಮನೆಯಲ್ಲೇ ಯೋಗ ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರೂ ವೀಕ್ಷಿಸುವಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಯೋಗ ಕಲಿತವರು ಕರೊನಾದಿಂದ ಪಾರಾಗಿದ್ದಾರೆ, ಪ್ರಾಣಾಯಾಮ, ಧ್ಯಾನದಿಂದ ಯಾವುದೇ ರೋಗ ನಿಯಂತ್ರಣಕ್ಕೆ ತರಬಹುದು ಎಂದರು. ಕೂಡಾ ನಿರ್ದೇಶಕ ಅಪ್ಪಿ ನಾರಾಯಣಸ್ವಾಮಿ, ಯೋಗ ಶಿಕ್ಷಕ ರಘುಪತಿ ಇನ್ನಿತರರಿದ್ದರು.

ಪತಂಜಲಿ ಕೇಂದ್ರ: ನಗರದ ಬಿಎಸ್‌ಎನ್‌ಎಲ್ ಬಳಿಯ ಪತಂಜಲಿ ಯೋಗ ಶಿಕ್ಷಣ ಸಮಿತಿ ಭವನದಲ್ಲಿ ಯೋಗ ಶಿಕ್ಷಕ ಹಾಗೂ ಸಮಿತಿ ಕಾರ್ಯದರ್ಶಿ ಡಾ.ಜನಾರ್ದನ ರಾಜ್ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ನಡೆಯಿತು. ಸಮಿತಿ ಅಧ್ಯಕ್ಷ ಬಿಸಪ್ಪಗೌಡ ಇಳಿ ವಯಸ್ಸಿನಲ್ಲೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷ.

ಬಿಜೆಪಿ ಕಚೇರಿಯಲ್ಲಿ ಆಚರಣೆ: ಕೋಲಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲೂ ಯೋಗ ದಿನ ಆಚರಿಸಲಾಯಿತು. ಪಕ್ಷದ ಜಿಲ್ಲಾ ಕೋರ್ ಕಮಿಟಿ ಸದಸ್ಯರಾದ ವಿಜಯಕುಮಾರ್, ಎಸ್.ಬಿ.ಮುನಿವೆಂಕಟಪ್ಪ, ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಮಂಜುನಾಥ್, ಶ್ರೀಗಂಧ ರಾಜೇಜ್, ತೇಜಸ್, ರಾಜೇಶ್ ಸಿಂಗ್ ಹಾಗೂ ಗಾಂಧಿನಗರ ರವಿಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.

ಉತ್ತಮ ಪ್ರತಿಕ್ರಿಯೆ: ನಗರದ ವಿವೇಕಾನಂದ ಯೋಗ ಚಾರಿಟಬಲ್ ಟ್ರಸ್ಟ್, ಆಯುಷ್ ಇಲಾಖೆ ಹಾಗೂ ವಿಜಯವಾಣಿ ಸಹಯೋಗದಲ್ಲಿ ನಗರದ ಕನಕನಪಾಳ್ಯದಲ್ಲಿ ನಡೆದ ಆನ್‌ಲೈನ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಟ್ರಸ್ಟ್ ಅಧ್ಯಕ್ಷ ಯೊಗರತ್ನ ಎನ್.ನಾಗರಾಜ್ ಮಾರ್ಗದರ್ಶನಲ್ಲಿ ನೂರಾರು ಮಂದಿ ಮನೆಗಳಿಂದಲೇ ಆನ್‌ಲೈನ್ ಮೂಲಕ ಯೋಗ ಪ್ರದರ್ಶಿಸಿದರು. ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೂ ಯೋಗ ಕಲಿಸಲು ಬದ್ಧ, ಜಿಲ್ಲಾಡಳಿತ ಅವಕಾಶ ನೀಡಿದಲ್ಲಿ ಆನ್‌ಲೈನ್ ಮೂಲಕ ತರಬೇತಿ ನೀಡಲಾಗುವುದು ಎಂದು ನಾಗರಾಜ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net