

ಬೀರೂರು: ಆರೋಗ್ಯ ಸೂತ್ರಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಲು ಯೋಗ ವಿದ್ಯೆ ಪ್ರೇರಕ. ವಿಶ್ವಮಾನ್ಯತೆ ಗಳಿಸಿದ ಯೋಗ ವಿದ್ಯೆಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಆಯುಷ್ ವೈದ್ಯ ಗವಿರಂಗಪ್ಪ ತಿಳಿಸಿದರು.
ಸುರಭಿಯೋಗ ಕೇಂದ್ರದಿಂದ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಿಗೆ ದೈಹಿಕ ವ್ಯಾಯಾಮದ ಜತೆ ನಿಯಮಿತ ಯೋಗಾಸನಗಳನ್ನು ಹೇಳಿಕೊಡಬೇಕು ಎಂದರು.
ಸುರಭಿ ಯೋಗ ಕೇಂದ್ರದ ಶಿಕ್ಷಕಿ ಸಿತಾರಾ ಮಾತನಾಡಿ, ದೈನಂದಿನ ಬದುಕಿನ ಕೆಲ ಸಮಯವನ್ನು ಯೋಗ, ಧ್ಯಾನ, ಪ್ರಾಣಾಯಾಮಕ್ಕೆ ಮೀಸಲಿಡಬೇಕು ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಶಾಲೆಗಳು ಹಾಗೂ ಸಂಘಸಂಸ್ಥೆಗಳು ಯೋಗವಿದ್ಯೆಯ ಪ್ರಚಾರಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಯೋಗ ಕೇಂದ್ರದ ವಿದ್ಯಾರ್ಥಿಗಳು ಯೋಗಾಸನ ಪ್ರದರ್ಶಿಸಿದರು. ಯೋಗಕೇಂದ್ರದ ಹನುಮಂತರಾಜು, ಜೆಸಿಐ ಬೀರೂರು ಘಟಕದ ಅಧ್ಯಕ್ಷ ಎಂ.ಎಲ್.ಮೋಹನ್‌ಕುಮಾರ್, ಕಾಶೀನಾಥ್, ವಿಶ್ವನಾಥ್, ಶ್ರೀರಾಮ್, ಇತರರಿದ್ದರು.