

ಮೈಸೂರು: ಯೋಗ ನಗರಿ ಮೈಸೂರಿನಲ್ಲಿ ಯೋಗ ಸಂಭ್ರಮ ಶನಿವಾರ ಮೇಳೈಸಿತ್ತು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಗರದ ಎಲ್ಲೆಡೆ ನಡೆಯಿತು.
ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಸಂಸ್ಥೆಗಳು, ಸಂಘಗಳ ಆವರಣದಲ್ಲಿ ನೂರಾರು ಜನರು ಯೋಗಾಸನ ಮಾಡಿದರು. ಈ ಮೂಲಕ ಯೋಗದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಿತು. ಜತೆಗೆ, ಪ್ರತಿಯೊಬ್ಬರು ಇದನ್ನು ತಮ್ಮ ದೈನಂದಿನ ದಿನಚರಿಯ ಭಾಗವಾಗಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿತು.
ಕೇಂದ್ರ ಸಂವಹನ ಇಲಾಖೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ವತಿಯಿಂದ ಶಕ್ತಿನಗರದ ಅಧ್ಯಯನ ಶಾಲೆ ಮತ್ತು ಕಾಲೇಜಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ನಡೆಯಿತು. ಈ ಬಾರಿಯ ಧ್ಯೇಯವಾಕ್ಯ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಪರಿಕಲ್ಪನೆಯಲ್ಲಿ ಯೋಗ ಕಾರ್ಯಕ್ರಮ ನಡೆಸಿ ಹಲವು ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.
ಒಂದು ತಾಸು ಸಾಮಾನ್ಯ ಯೋಗಾಸನ ಹಾಗೂ ಪ್ರಾಣಾಯಾಮವನ್ನು ನುರಿತ ಯೋಗತಜ್ಞರ ಮಾರ್ಗದರ್ಶನದೊಂದಿಗೆ ನಡೆಸಲಾಯಿತು. ಯೋಗ ದಿನದ ಅಂಗವಾಗಿ ಯೋಗ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಮಕ್ಕಳು ಯೋಗದ ಮಹತ್ವ ಕುರಿತು ಭಾಷಣ ಮಾಡಿದರು. ವಿವಿಧ ಆಸನಗಳ ಮಾಹಿತಿ ಕುರಿತು ಶಾಲಾ ಆವರಣದಲ್ಲಿ ಭಿತ್ತಿ ಪತ್ರ ಪ್ರದರ್ಶನ ಮೂಲಕ ವಿವಿಧ ಯೋಗಾಸನಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸದೃಢ ಸ್ವಾಸ್ತ್ಯ ಹಾಗೂ ಶಿಸ್ತುಬದ್ಧ ಜೀವನಕ್ಕಾಗಿ ಯೋಗ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಬೇಕೆ ಎಂದು ಶಾಲಾ ಅಧ್ಯಕ್ಷ ಎ.ಜವರಪ್ಪ ಹೇಳಿದರು.
ಶಾಲಾ ಕಾರ್ಯದಶಿ, ಯೋಗ ಮಾರ್ಗದರ್ಶಕ ಎಂ.ಪಾರ್ವತಿದೇವಿ ಅವರು ಯೋಗದ ವಿವಿಧ ಆಸನಗಳ ಉಪಯುಕ್ತತೆ ಕುರಿತು ಮಾಹಿತಿ ನೀಡಿ ಯೋಗಾಭ್ಯಾಸ ಮಾಡಿಸಿದರು.
ಕೇಂದ್ರ ಸಂವಹನ ಇಲಾಖೆ ಕ್ಷೇತ್ರ ಪ್ರಚಾರ ಅಧಿಕಾರಿ ಎಸ್.ಟಿ.ಶ್ರುತಿ, ಕ್ಷೇತ್ರ ಪ್ರಚಾರ ಸಹಾಯಕ ದರ್ಶನ್, ಶಿಕ್ಷಕರಾದ ದೀಪ್ತಿ, ಕವಿತಾ , ಮುಖ್ಯಪಾಧ್ಯಾಯ ಪುಟ್ಟಸ್ವಾಮಿಗೌಡ ಇದ್ದರು.
ವಿಜಯ ವಿಠಲ ವಿದ್ಯಾಶಾಲೆಯಲ್ಲಿ ವಿಶೇಷ ಯೋಗ ಅಧಿವೇಶನ ನಡೆಯಿತು. ವಿದ್ಯಾರ್ಥಿಗಳು ಉತ್ಸಾಹ ಮತ್ತು ಶಿಸ್ತಿನಿಂದ ಸರಣಿ ಯೋಗಾಸನ ಪ್ರದರ್ಶಿಸಿದರು. ದೈಹಿಕ ಸದೃಢತೆ, ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನ ಉತ್ತೇಜಿಸುವಲ್ಲಿ ಯೋಗದ ಮಹತ್ವವನ್ನು ಸಾರಿದರು.
ಬೋಗಾದಿ ರಸ್ತೆಯ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಶಾಲಾ ಆಡಳಿತಾಧಿಕಾರಿ ಕಾಂತಿ ನಾಯಕ್, ಮುಖ್ಯ ಶಿಕ್ಷಕ ಮೊಹಮ್ಮದ್ ಫಾರೂಕ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
ಹೆಬ್ಬಾಳಿನಲ್ಲಿರುವ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ‘ಒಂದು ಭೂಮಿ ಒಂದು ಆರೋಗ್ಯ’ ಶೀರ್ಷಿಕೆ ಅಡಿಯಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯೋಗ ಗುರು ಡಾ.ಎ.ಎಸ್.ಚಂದ್ರಶೇಖರ್ ಮಾತನಾಡಿ, ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು. ಆಹಾರದಲ್ಲೂ ಕಲಬೆರಕೆ ಇದೆ. ಆದ್ದರಿಂದ ಯೋಗ ಅಭ್ಯಾಸವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಯುವಶಕ್ತಿ ಯೋಗ ಧ್ಯಾನದ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಯೋಗಾಸನವು ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. 100 ವಿದ್ಯಾರ್ಥಿಗಳು ಯೋಗಾಸನ ಮಾಡಿದರು.
ಪ್ರಾಂಶುಪಾಲರಾದ ಡಾ. ಸೌಮ್ಯಾ ಈರಪ್ಪ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ನಾಗೇಂದ್ರ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಗುರುಮೂರ್ತಿ ಭಟ್, ಎನ್‌ಸಿಸಿ ಘಟಕದ ಮುಖ್ಯಸ್ಥ ಲೆಫ್ಟಿನೆಂಟ್ ಕುಮಾರ್, ಯೂತ್ ರೆಡ್ ಕ್ರಾಸ್ ಘಟಕದ ಮುಖ್ಯಸ್ಥ ಪ್ರೊ.ಎಂ. ವಿನಯ, ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಕೃಪಾಲನಿ ಇನ್ನಿತರರಿದ್ದರು.