

ಬೀದರ್: ಯೋಗವನ್ನು ಪ್ರತಿಯೊಬ್ಬರೂ ದೈನಂದಿನ ಚಟುವಟಿಕೆಗಳ ಒಂದು ಭಾಗವಾಗಿಸಿಕೊಳ್ಳಬೇಕು. ಯೋಗದ ಜತೆಗೆ ಧ್ಯಾನ ಸಹ ಮಾಡಿದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುವ ಜತೆಗೆ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಚಿದಂಬರಾಶ್ರಮದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಆಯುಷ್ ಇಲಾಖೆ, ಸೂರ್ಯ ಫೌಂಡೇಷನ್, ಅಂತಾರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ, ಮುರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಸಹಯೋಗದಡಿ ನಗರದ ಎನ್.ಕೆ. ಜಾಬಶೆಟ್ಟಿ ಆಯುರ್ವೆದ ಕಾಲೇಜಿನಲ್ಲಿ ಆಯೋಜಿಸಿದ್ದ ಯೋಗ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಯೋಗ, ಆಯುರ್ವೇದ, ಪ್ರಾಕೃತಿಕ ಚಿಕಿತ್ಸಾ ಪದ್ಧತಿ ಬಗ್ಗೆ ಅರಿವಿಲ್ಲದ ಕಾರಣ ಜನರಿಗೆ ಅನಾರೋಗ್ಯ ಕಾಡುತ್ತಿದೆ. ಯೋಗ ಬದುಕಿನ ಭಾಗವಾಗಬೇಕು ಎಂದರು.
ಮನುಷ್ಯ ಆರೋಗ್ಯಯುತ ಜೀವನ ನಡೆಸದೆ ತನ್ನ ಕಾರ್ಯದ ಒತ್ತಡದಲ್ಲಿ ದಿನೇದಿನೆ ರೋಗ ನಿರೋಧಕ ಶಕ್ತಿಯನ್ನು ಕ್ಷಿಣಿಸಿಕೊಳ್ಳುತಿದ್ದಾನೆ. ಇದರಿಂದಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಆಸ್ಪತ್ರೆ ಬಾಗಿಲು ತಟ್ಟುತ್ತಿದ್ದು, ಸ್ವತಃ ತನ್ನಿಂದಲೇ ಆರೋಗ್ಯ ಹಾಳು ಮಾಡಿಕೊಳ್ಳುತಿದ್ದಾನೆ. ಹೀಗಾಗಿ ಪ್ರತಿಯೊಬ್ಬರೂ ಯೋಗವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ನವದೆಹಲಿಯ ಡಾ.ಎಂ.ಕೆ. ತನೆಜಾ, ಭ್ರಮರಿ ಪ್ರಾಣಾಯಾಮ ಮನಸ್ಸಿನ ಪ್ರಶಾಂತತೆಗೆ ಸಹಕಾರಿಯಾಗಿದೆ. ಸರಿಯಾಗಿ ನಿದ್ರೆ ಬಾರದಿರುವುದು ಹಾಗೂ ನಿದ್ರೆ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. ಮಾನಸಿಕ ಒತ್ತಡ, ಆತಂಕಗಳನ್ನು ಸಹ ದೂರ ಮಾಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಣಾಯಾಮ ಮತ್ತು ಭ್ರಮರಿಯನ್ನು ಕಡ್ಡಾಯವಾಗಿ ಮಾಡಬೇಕು ಎಂದರು.
ಇನ್ನೋರ್ವ ಉಪನ್ಯಾಸಕಿ ಹೈದರಾಬಾದ್ ನ ಡಾ.ವಿಜಯಲಕ್ಷ್ಮೀ ರೆಡ್ಡಿ ಮಾತನಾಡಿ, ಆರೋಗ್ಯಕರ ಜೀವನಶೈಲಿ ಪ್ರತಿಯೊಬ್ಬರಿಗೆ ಪ್ರಮುಖವಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಅನೇಕ ಜವಾಬ್ದಾರಿಗಳನ್ನು ಮನೆಯೊಳಗೆ ಮತ್ತು ಹೊರಗೆ ಹೊಂದಿರುತ್ತಾರೆ. ಈ ಜವಾಬ್ದಾರಿಗಳನ್ನು ನಿಭಾಯಿಸಲು ಯೋಗ ಬಹಳಷ್ಟು ಸಹಕಾರಿ ಎಂದು ಹೇಳಿದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಯೋಗ ವಿಶ್ವಕ್ಕೆ ಭಾರತ ಕೊಟ್ಟ ಬಹುದೊಡ್ಡ ಕೊಡುಗೆ. ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮೂಲಕ ದೇಶದ ಘನತೆ, ಗೌರವ ಹೆಚ್ಚಿಸಿದ್ದಾರೆ. ನಿತ್ಯ ಬೆಳಗ್ಗೆ ಒಂದು ತಾಸು ಯೋಗಕ್ಕೆ ಸಮಯ ಮೀಸಲಿಟ್ಟು ಮುಂದಿನ ದಿನಚರಿ ಆರಂಭಿಸಬೇಕು ಎಂದು ತಿಳಿಸಿದರು.
ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ಯೋಗಾಭ್ಯಾಸ ಪದ್ಧತಿಗೆ ಹಲವಾರು ವರ್ಷದ ಇತಿಹಾಸವಿದೆ. ಪೂರ್ವಜರು ದೀರ್ಘಾಯುಷಿಗಳಾಗಿ ಯಾವುದೇ ಕಾಯಿಲೆ ಇಲ್ಲದೆ ಅತ್ಯಂತ ಆರೋಗ್ಯಕರವಾಗಿ ಇತರರಿಗೆ ಮಾದರಿಯಾಗಿ ಬಾಳಿ ಬದುಕಿದ ದಿನಗಳಿಗೆ ಯೋಗವೇ ಪ್ರಮುಖ ಕಾರಣ ಎಂದರು.
ಆರಂಭದಲ್ಲಿ ಕಷ್ಟ ಎನಿಸಿದರೂ ನಂತರದಲ್ಲಿ ಬಹಳಷ್ಟು ಸುಲಭವಾಗಿ ಯೋಗದ ವಿವಿಧ ಭಂಗಿಗಳನ್ನು ಅನುಸರಿಸಬಹುದು. ವ್ಯಾಯಾಮದಂತೆ ಯೋಗ ಮಾಡಲು ಉಪಕರಣಗಳ ಅಗತ್ಯವಿಲ್ಲ. ಹೀಗಾಗಿ ನಿತ್ಯವೂ ಯೋಗ ಮಾಡುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಯುಷ್ ಇಲಾಖೆ ಆಡಳಿತ ಮಂಡಳಿ ಸದಸ್ಯ ಅನಂತ ಬಿರಾದಾರ್ ಮಾತನಾಡಿ, 9ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ 100 ದಿನದ ಕೌಂಟ್ ಡೌನ್ ಆರಂಭ ಸೂಚಿಸುವ ಸಲುವಾಗಿ ಮತ್ತು ಯೋಗದ ಪ್ರಚಾರ ಮತ್ತು ಪ್ರಸಾರಕ್ಕಾಗಿ ದೇಶಾದ್ಯಂತ ನೂರು ಕಡೆ ಯೋಗ ಮಹೋತ್ಸವ ನಡೆಸಲಾಗುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನೊವಾಲ್ ಅವರ ನಿರಂತರ ಪ್ರಯತ್ನಗಳು ಯೋಗ, ಆಯುರ್ವೆದ, ಪ್ರಾಕೃತಿಕ ಚಿಕಿತ್ಸೆ ಮತ್ತು ಸಾಂಪ್ರದಾಯಿಕ ಜ್ಞಾನದ ಆರೋಗ್ಯ ವ್ಯವಸ್ಥೆಗಳಲ್ಲಿ ಭಾರತದ ನಾಯಕತ್ವವನ್ನು ಬಹಳಷ್ಟು ಸಕ್ರಿಯಗೊಳಿಸಿದೆ. ಯೋಗದ ಪ್ರಚಾರ ಮತ್ತು ಪ್ರಸಾರದ ಮೂಲಕ ಭಾರತವು ಜಾಗತಿಕವಾಗಿ ಆರೋಗ್ಯ ಮತ್ತು ಸ್ವಾಸ್ಥ್ಯ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ ಎಂದರು.
ಚಿದಂಬರ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಉದಯಭಾನು ಹಲವಾಯಿ, ಬಿ.ಜಿ. ಶೆಟಕಾರ, ಶಿವಶರಣಪ್ಪ ಸಾವಳಗಿ, ಮಡಿವಾಳಪ್ಪ ಗಂಗಶೆಟ್ಟಿ, ಪ್ರಾಚಾರ್ಯ ಡಾ.ಚಂದ್ರಕಾಂತ ಹಳ್ಳಿ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅಶೋಕ ನಾಗೂರೆ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಡಾ.ಹಾವಗಿರಾವ ಮೈಲಾರೆ, ಡಾ.ವಿಜಯಕುಮಾರ ಬಿರಾದಾರ್, ಬಾಬುರಾವ ಕಾರಬಾರಿ, ಅನೀಲ ಬಿರಾದಾರ್, ಸತ್ಯಪ್ರಕಾಶ, ಯೋಗೇಂದ್ರ ಯದಲಾಪುರೆ, ಸಚ್ಚಿದಾನಂದ ಚಿದ್ರೆ, ಗುರುನಾಥ ಮೂಲಗೆ, ಸುಜೀತ್ ಪಂಢರಾಪುರ, ಧೋಂಡಿರಾಮ ಚಾಂದಿವಾಲೆ, ಶ್ರೀಕಾಂತ ಮೋದಿ, ಕಾಮಶೆಟ್ಟಿ ಚಿಕಬಸ್ಸೆ, ವಿಶ್ವನಾಥ ಉಪ್ಪೆ, ಲೋಕೇಶ ಗೋರ್ಟಾ, ವಿನೋದ ಪಾಟೀಲ್, ಶಶಾಂಕ ಹೊಸಮನಿ, ರೇವಣಸಿದ್ದಪ್ಪ ಜಲಾದೆ, ಗಣಪತರಾವ ಖೂಬಾ, ಜಗದೀಶ ಖೂಬಾ, ಜಗದೀಶ ಮುಖೇಡಕರ್, ಬಾಬುರಾವ ದಾನಿ, ಶಿವಮೂರ್ತಿ ಬಟನಾಪುರೆ, ಅಮೃತ ಹೊಸಮನಿ, ಶಿವಶರಣಪ್ಪ ಹಣಮಶೆಟ್ಟಿ, ನಂದಕುಮಾರ ತಾಂದಳೆ, ಅಜಯಕುಮಾರ ದುಬೆ, ವಿಜಯಲಕ್ಷ್ಮೀ ಡೊಯಜೋಡೆ ಇತರರಿದ್ದರು. ಸೂರ್ಯ ಫೌಂಡೇಷನ್ ಜಿಲ್ಲಾ ಸಂಯೋಜಕ, ಯೋಗ ಮಹೋತ್ಸವದ ಸಂಚಾಲಕ ಗುರುನಾಥ ರಾಜಗೀರಾ ಪ್ರಾಸ್ತಾವಿಕ ಮಾತನಾಡಿದರು.