

ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯೋಗ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಜಾಥಾಗೆ ನಗರಸಭೆ ಆಯುಕ್ತ ಸತೀಶ್ ಚಾಲನೆ ನೀಡಿದರು.
‘ವಸುದೈವ ಕುಟುಂಬಕಂ- ಪ್ರತಿ ಮನೆಯ ಅಂಗಳದಲ್ಲೂ ಯೋಗ’ ಎನ್ನುವ ವೇದವಾಕ್ಯದೊಂದಿಗೆ ಯೋಗ ಜಾಥಾ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಟು ಬಿ.ಎಂ. ರಸ್ತೆ ಮೂಲಕ ಎನ್.ಆರ್. ವೃತ್ತಕ್ಕೆ ಆಗಮಿಸಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಯೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.
ನಗರಸಭೆ ಆಯುಕ್ತ ಸತೀಶ್ ಮಾತನಾಡಿ, ಪ್ರತಿದಿನ ಕೆಲ ಸಮಯ ಯೋಗಕ್ಕಾಗಿ ಮೀಸಲಿಟ್ಟರೆ ಜೀವನಪೂರ್ತಿ ಆರೋಗ್ಯ ಕಾಪಾಡಿಕೊಂಡು ಸಂತೋಷದಿಂದ ಇರಬಹುದು. ಯೋಗವನ್ನು ಜೀವನದಲ್ಲಿ ಕ್ರಮಬದ್ಧವಾಗಿ ಮೈಗೂಡಿಸಿಕೊಂಡರೆ ಜೀವನ ಆರೋಗ್ಯಮಯವಾಗಿರುತ್ತದೆ ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿ ಪರಿವಾರದ ಶೇಷಪ್ಪ ಮಾತನಾಡಿ, ವಿಶ್ವ ಯೋಗ ದಿನದ ಅಂಗವಾಗಿ ಯೋಗ ಜಾಥಾ ಹಮ್ಮಿಕೊಳ್ಳಲಾಗಿದೆ. ವಿಶ್ವ ಶಾಂತಿಗಾಗಿ ಮತ್ತು ಆರೋಗ್ಯಕ್ಕಾಗಿ ಜಾಥಾ ಮಾಡಲಾಗುತ್ತಿದೆ. ಭಾರತ ಇಡೀ ವಿಶ್ವಕ್ಕೆ ಯೋಗ ಹಾಗೂ ಜ್ಞಾನವನ್ನು ನೀಡಿದಂತಹ ದೇಶ. ನಾವು ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ ಯೋಗಕ್ಕೆ ಸೀಮಿತವಾಗಬಾರದು. ವರ್ಷವಿಡೀ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಆಯುರ್ವೇದ ಆಸ್ಪತ್ರೆಯ ವೀಣಾಲತಾ, ಪತಂಜಲಿ ಯೋಗ ಪರಿವಾರದ ರಾಧಾ ತಿವಾರಿ, ಗಿರೀಶ್, ಆರೋಗ್ಯ ಇಲಾಖೆಯ ಮಂಜುನಾಥ್, ಭಾರತ್ ಸೇವಾದಳದ ಸಂಘಟಕಿ ವಿ.ಎಸ್. ರಾಣಿ, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.