

ಸಾಗರ: ಯೋಗಾಸನ ಮನುಷ್ಯನ ಬದುಕಿಗೆ ಪೂರಕವಾದುದು. ಯೋಗ ಕಲಿತರೆ ರೋಗದಿಂದ ದೂರ ಉಳಿಯಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ವರಿಷ್ಠ ಶಿಕ್ಷಣಾಕಾರಿ ಶಂಕರನಾರಾಯಣ ಶಾಸ್ತ್ರೀ ಹೇಳಿದರು.
ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಶುಕ್ರವಾರ ಶೃಂಗೇರಿ ಶಂಕರಮಠ, ವಿಜಯನಗರ ನಾಗರಿಕ ವೇದಿಕೆ, ಅಭಿನಯ ಸಾಗರದಿಂದ ಆಯೋಜಿಸಿದ್ದ ಮೂರು ದಿನಗಳ ಯೋಗಾಸನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ರೋಗಗಳು ಸೂಕ್ಷ್ಮಜೀವಿಯಿಂದ ಪ್ರಾರಂಭವಾಗುತ್ತದೆ. ಅದನ್ನು ನಾಶ ಮಾಡಿದಾಗ ರೋಗ ಗುಣವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಯೋಗದಿಂದ ಔಷಧ ಇಲ್ಲದೆ ರೋಗಗಳನ್ನು ಗುಣಪಡಿಸಬಹುದು. ನಮ್ಮಲ್ಲಿರುವ ರೋಗನಿರೋಧಕ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಯೋಗ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುವ ಜತೆಗೆ ಆರೋಗ್ಯ ಸಹ ಸಮಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಎಂದರು.
ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಹಿರಿಯ ಸಲಹೆಗಾರ ಮಾ.ಸ.ನಂಜುಂಡಸ್ವಾಮಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಯೋಗ ಧ್ಯಾನ ಪ್ರಾಣಾಯಾಮಕ್ಕೆ ವಿಶೇಷ ಸ್ಥಾನವಿದೆ. ಯೋಗದಿಂದ ರೋಗ ದೂರ ಎನ್ನುವ ಮಾತಿದೆ. ಯೋಗವನ್ನು ವಿಶ್ವವೇ ಒಪ್ಪಿಕೊಂಡಿದ್ದರೂ ನಮ್ಮಲ್ಲಿ ಮಾತ್ರ ಅದರ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದದೆ ಇರುವುದು ದುರಾದೃಷ್ಟ ಸಂಗತಿ. ಪ್ರಸ್ತುತ 90ವರ್ಷದ ಶಂಕರ ನಾರಾಯಣ ಶಾಸ್ತ್ರೀ ಈ ವಯಸ್ಸಿನಲ್ಲಿಯೂ ಆರೋಗ್ಯವಾಗಿದ್ದಾರೆ ಎಂದರೆ ಅವರಲ್ಲಿರುವ ಯೋಗಶಕ್ತಿಯೇ ಕಾರಣ. ಮೂರು ದಿನಗಳ ಯೋಗ ಪ್ರಾಣಾಯಾಮ ತರಬೇತಿ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಅಶ್ವಿನಿಕುಮಾರ್, ನಾಗರಾಜ್, ಪರಶುರಾಮಪ್ಪ, ಜ್ಯೋತಿ ನಂಜುಂಡಸ್ವಾಮಿ, ಜ್ಯೋತಿ, ನೇತ್ರಾ ಉಡುಪ, ನಾರಾಯಣಮೂರ್ತಿ, ಬದರಿನಾಥ್, ಕೌಶಿಕ್ ಇತರರಿದ್ದರು.