

ಮೈಸೂರು: ಮೈಸೂರಿನಲ್ಲಿ ಹಲವಾರು ಯೋಗ ದಾಖಲೆಗಳು ಸೃಷ್ಟಿಯಾಗಿವೆ. ಇದಕ್ಕೆ ಪೂರಕವಾಗಿ ಮತ್ತಷ್ಟು ಯೋಗ ಚಟುವಟಿಕೆ ಹೆಚ್ಚಾಗುವಂತೆ ಉತ್ತೇಜನ ನೀಡಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ತಿಳಿಸಿದರು.
ನಂಜನಗೂಡಿನ ಶ್ರೀ ಬಸವರಲಿ ಯೋಗ ಪ್ರತಿಷ್ಠಾನದಿಂದ ಪೈಲ್ವಾನ್ ಯಜಮಾನ್ ಶ್ರೀಬಸವರಾಜು ಅವರ ಸ್ಮರಣಾರ್ಥ ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್ ಪೆವಲಿಯನ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ವರ್ಷದ ಕರ್ನಾಟಕ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜರ ಕಾಲದಿಂದಲೂ ಮೈಸೂರಿನಲ್ಲಿ ಯೋಗಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರಿಂದ ಹಲವಾರು ದಾಖಲೆಗಳು ನಿರ್ಮಾಣವಾಗಿ ಯೋಗ ನಗರಿಯಾಗಿದೆ. ಇಲ್ಲಿ ನಿತ್ಯವೂ ನಾನಾ ಯೋಗ ಕೇಂದ್ರಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಯೋಗಾಭ್ಯಾಸ ಮಾಡುತ್ತಾರೆ. ಈಗ ಗ್ರಾಮಾಂತರ ಪ್ರದೇಶದಲ್ಲಿಯೂ ಯೋಗಾಭ್ಯಾಸ ಹೆಚ್ಚಾಗುತ್ತಿರುವುದು ಉತ್ತೇಜನಕಾರಿ ಬೆಳವಣಿಗೆಯಾಗಿದೆ. ಈ ಕಾರ್ ಇನ್ನಷ್ಟು ಹೆಚ್ಚಾಗಬೇಕು. ಪ್ರತಿಯೊಬ್ಬರಿಗೂ ಯೋಗ ಕೈಗೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಸ್ಪರ್ಧೆಗೆ ಚಾಲನೆ ನೀಡಿದರು. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಂ.ಎಸ್.ಕುಮಾರ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಬಿಎಂ ಪ್ರಸನ್ನ, ನಂಜನಗೂಡಿನ ಬಸವರಲಿ ಯೋಗ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ಬಿ. ರವಿ, ಧ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಅರುಣ್ ಪಾಟೀಲ್, ನಂಜನಗೂಡು ನಗರಸಭೆ ಸದಸ್ಯ ಶ್ರೀಕಂಠಸ್ವಾಮಿ ಇತರರು ಇದ್ದರು.
ಎಂಟು ವಿಭಾಗದಲ್ಲಿ ಸ್ಪರ್ಧೆ:
ವಿವಿಧ ವಯೋಮಾನಕ್ಕೆ ಅನುಗುಣವಾಗಿ 8 ವಿಭಾಗಗಳಲ್ಲಿ ಆಯೋಜಿಸಿದ್ದ ಸ್ಫರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ 360 ಮಂದಿ ಭಾಗವಹಿಸಿದ್ದರು. ಸ್ಪರ್ಧಿಗಳು ವೀರಭದ್ರಾಸನ, ವೃಕ್ತಾಸನ, ಪರಿಪೂರ್ಣ ನಾವಾಸನ, ಪೂರ್ವೋತ್ತನಾಸನ, ಹಲಾಸನ, ಉತ್ಥಿತ ತ್ರಿಕೋಣಾಸನ, ಉಷ್ಟ್ರಾಸನ, ಚಕ್ರಾಸನ, ಪರಿಪೂರ್ಣ ನಾವಾಸನ, ಜಾನು ಶೀರ್ಷಾಸನ, ಮಕರಾಸನ ಸೇರಿದಂತೆ ನಾನಾ ಆಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.