

ಧಾರವಾಡ: ಆತ ಗ್ರಾಮದ ಶಾಲೆಯಲ್ಲಿ ಓದಿ, ಭಾರತೀಯ ಸೇನೆ ಸೇರಿದ್ದ. ಬಡತನದಲ್ಲಿ ಶಿಕ್ಷಣ ಕಲಿತು ದೇಶಕ್ಕಾಗಿ ಪ್ರಾಣ ಮುಡಿಪಿಟ್ಟು ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಮೂವರು ಉಗ್ರರನ್ನು ಸದೆಬಡಿದಿದ್ದ. ಸೈನಿಕ ಸೇವೆ ಮುಗಿಸಿ ಮರಳಿ ಬಂದ ಯೋಧನಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ ಹೃದಯರ್ಸ³ ಕಾರ್ಯಕ್ರಮ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಗುರುವಾರ ನಡೆಯಿತು.
ಹೆಬ್ಬಳ್ಳಿಯ ಈರವ್ವ ಹಾಗೂ ನಾರಾಯಣ ಗಡಾದ ದಂಪತಿಯ ಪುತ್ರ ಬಸವರಾಜ ಗಡಾದ, 2001ರಲ್ಲಿ ಸೈನ್ಯಕ್ಕೆ ಸೇರಿದ್ದರು. ಮದ್ರಾಸ್ ರಿಜಿಮೆಂಟ್ನಲ್ಲಿ ಹವಾಲ್ದಾರ್ ಆಗಿದ್ದ ಬಸವರಾಜ, ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಂಚಗಾಂವ್ನಲ್ಲಿ ನಡೆದ ಉಗ್ರರ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಮತ್ತೊಂದೆಡೆ ನೌಶಾರಾ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಒಬ್ಬ ಉಗ್ರನನ್ನು ಸೆದೆ ಬಡಿದಿದ್ದರು. ಜಮ್ಮು ಕಾಶ್ಮೀರ, ಸಿಯಾಚಿನ್, ಲೆಹ್, ಲಡಾಕ್ ಮತ್ತಿತರೆಡೆ 17 ವರ್ಷ ಸೇವೆ ಸಲ್ಲಿಸಿದ ಬಳಿಕ ತವರಿಗೆ ಬಂದ ಯೋಧನಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಅಪ್ನಾದೇಶ, ಶಾಲಾ ಮಕ್ಕಳು, ಹೆಬ್ಬಳ್ಳಿ ಗ್ರಾಮದ ಗುರು ಹಿರಿಯರು, ಯೋಧನ ಸ್ನೇಹಿತರ ಬಳಗದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ತೆರೆದ ವಾಹನದಲ್ಲಿ ಊರಿನಲ್ಲಿ ಮೆರವಣಿಗೆ ಮಾಡಲಾಯಿತು. ಯೋಧನ ಇಬ್ಬರು ಮಕ್ಕಳು ತಂದೆಯ ಸನ್ಮಾನವನ್ನು ಕಣ್ತುಂಬಿಕೊಂಡರು.