ಯೋಜನೆ ಹೆಸರಲ್ಲಿ ಜಿಲ್ಲೆಗೆ ಅನ್ಯಾಯ

25Naregal1
Published on

ನರೇಗಲ್ಲ: ಗದಗ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದಿರಲು ಜನಪ್ರತಿನಿಧಿಗಳು ಕಾರಣ. ಹಲವು ಯೋಜನೆಗಳು ಜಿಲ್ಲೆಯಿಂದ ಕೈಬಿಟ್ಟು ಹೋಗಿವೆ. 1910ರಲ್ಲಿ ಬ್ರಿಟಿಷ್ ಸರ್ಕಾರದಿಂದ ರೂಪಿಸಿದ ಗದಗ-ವಾಡಿ ರೈಲ್ವೆ ಯೋಜನೆಯನ್ನು ತಿರುಚಿ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ ಎಂದು ಗದಗ-ವಾಡಿ ರೈಲ್ವೆ ಹೋರಾಟಗಾರ ಕಾಂತಿಲಾಲ್ ಜೈನ್ ಆರೋಪಿಸಿದರು.

ಪಟ್ಟಣದ ಬಸವೇಶ್ವರ ಇಂಜಿನಿಯರಿಂಗ್ ವರ್ಕ್ಸ್​ನಲ್ಲಿ ಶನಿವಾರ ಏರ್ಪಡಿಸಿದ್ದ ಗದಗ-ವಾಡಿ ರೈಲ್ವೆ ಹೋರಾಟ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜಿಲ್ಲೆಗೆ ಅನ್ಯಾಯ ಮಾಡಲಾಗುತ್ತಿದೆ. ಯೋಜನೆಯಡಿ ಜಿಲ್ಲೆಯ ಯಾವುದೇ ಗ್ರಾಮಕ್ಕೂ ರೈಲು ಸಂಪರ್ಕವಿಲ್ಲ. ಗದಗ-ಕೋಟುಮಚಗಿ-ನರೇಗಲ್ಲ-ಗಜೇಂದ್ರಗಡ- ಹನುಮಸಾಗರ- ಇಲಕಲ್ಲ-ಮುದಗಲ್ಲ ಮಾರ್ಗವು 252 ಕಿ.ಮೀ. ಹೊಂದಿದ್ದು, ಯೋಜನೆಯಿಂದ ಈ ಭಾಗದಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುತ್ತಿತ್ತು. ಆದರೆ, ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ಯೋಜನೆ ಕೈತಪ್ಪಿದೆ. ಗದಗ-ವಾಡಿ ರೈಲ್ವೆ ಹೋರಾಟವನ್ನು ಹತ್ತಿಕ್ಕಲು ಗದಗ-ಕೃಷ್ಣಾವರ ಯೋಜನೆ ಜಾರಿಗೊಳಿಸಲಾಗುವುದು ಎಂದಿದ್ದವರು ಇಂದು ಯೋಜನೆಯನ್ನು ರೈಲ್ವೆ ಮಂಡಳಿ ತಿರಸ್ಕರಿಸಿದೆ ಎನ್ನುತ್ತಿದ್ದಾರೆ. ಗದಗ-ವಾಡಿ ರೈಲು ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರವಾಗಿದೆ. ಅಲ್ಲದೆ, ರೈಲ್ವೆ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

ಸಾಹಿತಿ ಎಫ್.ಎಸ್. ಕರಿದುಗನ್ನವರ ಮಾತನಾಡಿ, ಯೋಜನೆಯಿಂದ ವಂಚಿತ ಗ್ರಾಮಸ್ಥರು ಪಕ್ಷಾತೀತವಾಗಿ ಹೋರಾಟಕ್ಕೆ ಧುಮಿಕಿದಾಗ ಮಾತ್ರ ಯಶಸ್ವಿಯಾಗಬಹುದು. ಸ್ಥಳೀಯ ಶಾಸಕರ ಮೂಲಕ ಸಂಸದರ ಮೇಲೆ ಒತ್ತಡ ತರುವ ಕಾರ್ಯವಾಗಬೇಕು. ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿಗೆ ಮನವಿ ಮಾಡಲು ಸಿದ್ಧತೆಗಳಾಗಬೇಕು. ಗದಗ-ವಾಡಿ ರೈಲ್ವೆ ಯೋಜನೆ ಅವ್ಯವಹಾರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದರು.

ಆ. 1ರಂದು ಗಜೇಂದ್ರಗಡದ ಮೈಸೂರು ಮಠದಲ್ಲಿ 10 ಗ್ರಾಮಗಳ ಪ್ರಮುಖರ ಸಭೆ ಕರೆಯಲಾಗಿದೆ. ಹೋರಾಟ ಸಮಿತಿ ರಚಿಸಿ ಕಾನೂನಾತ್ಮಕ, ಸಾಮಾಜಿಕ ಹೋರಾಟ ಬಗ್ಗೆ ನಿರ್ಣಯ ಕೈಗೊಳ್ಳಲು ತೀರ್ವನಿಸಲಾಯಿತು.

ವಿಜಯವಾಣಿ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟವಾದ ‘ಗದಗ-ವಾಡಿ ರೈಲ್ವೆ ಹೋರಾಟ ಮುನ್ನೆಲೆಗೆ’ ವಿಶೇಷ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.

ಗಣೇಶಸಿಂಗ್ ಬ್ಯಾಳಿ, ಸಿ.ವಿ. ವಂಕಲಕುಂಟಿ, ವಿ.ಎನ್. ಸೊನ್ನದ, ಬಿ.ಎಸ್. ಶೀಲವಂತರ, ಎಚ್.ಎಸ್. ಸೋಂಪೂರ, ಎಚ್.ಎಚ್. ಅಬ್ಬಿಗೇರಿ, ಪ್ರವೀಣ ವಿ.ಕೆ., ಜಗದೀಶ ಸಂಗನಗೌಡ್ರ, ಎಸ್.ಕೆ. ಸಂಕನಗೌಡ್ರ, ಶರಣಪ್ಪ ಧರ್ವಯತ, ಶಿವನಗೌಡ ಪಾಟೀಲ, ಡಾ. ಆರ್.ಕೆ. ಗಚ್ಚಿನಮಠ, ಶಿವನಗೌಡ ಕಡದಳ್ಳಿ, ಬಸವರಾಜ ಪಾಟೀಲ, ಅಶೋಕ ಬೇವಿನಕಟ್ಟಿ, ಚಿದಾನಂದ ವಂಕಲಕುಂಟಿ, ರಮೇಶ ಕಾಟಿ, ಮಂಜುನಾಥ ಹೆಗಡೆ, ನಿಂಗಪ್ಪ ಹೊನ್ನಾಪೂರ, ಮೌನೇಶ ಹೊಸಮನಿ, ಶ್ರೀಶೈಲಪ್ಪ ಬಂಡಿಹಾಳ, ಇತರರಿದ್ದರು. ಬಸವರಾಜ ವಂಕಲಕುಂಟಿ ನಿರ್ವಹಿಸಿದರು.

ಯೋಜನೆ ಜಾರಿ ಕುರಿತು ರೈಲ್ವೆ ಸಚಿವ, ಅಧಿಕಾರಿಗಳಿಗೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದರೂ ಉತ್ತರ ನೀಡುತ್ತಿಲ್ಲ. ಮೂಲ ಯೋಜನೆಯಂತೆ ಮಾರ್ಗ ರಚಿಸಲು ಮತ್ತೊಮ್ಮೆ ಹೋರಾಟ ನಡೆಸಬೇಕಾಗಿದೆ. ಯೋಜನೆಗೆ ಒಳಪಡುವ 10 ಪಟ್ಟಣಗಳ ಸಾರ್ವಜನಿಕರು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟದ ರೂಪುರೇಷೆ ತಯಾರಿಸಲಾಗುತ್ತದೆ.| ಕಾಂತಿಲಾಲ್ ಜೈನ್, ಗದಗ-ವಾಡಿ ರೈಲ್ವೆ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net