

ಶಿವಮೊಗ್ಗ: ಮೂರನೇ ಬಾರಿಗೆ ಪಾಲಿಕೆ ಸದಸ್ಯರಾಗಿರುವ ಗುಂಡಪ್ಪ ಶೆಡ್ ವಾರ್ಡ್ ಸದಸ್ಯ ಎಚ್.ಸಿ.ಯೋಗೀಶ್ ಪಾಲಿಕೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದು, ಫೆ.19ರ ಬೆಳಗ್ಗೆ 11ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ. ಮೊದಲ ಅವಧಿಯಲ್ಲಿ ರಮೇಶ್ ಹೆಗ್ಡೆ ಪ್ರತಿಪಕ್ಷ ನಾಯಕರಾಗಿದ್ದರು.
ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಎಚ್.ಸಿ.ಯೋಗೀಶ್, ಜನರಪ ಆಡಳಿತದ ಪರವಾಗಿ ಕೆಲಸ ಮಾಡುತ್ತೇನೆ. ಆಡಳಿತ ಪಕ್ಷದ ಲೋಪಗಳನ್ನು ಗಮನಕ್ಕೆ ತಂದು ನಗರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಕಳೆದ ಒಂದೂವರೆ ವರ್ಷದಿಂದಲೂ ಆಡಳಿತ ಪಕ್ಷವಾಗಿ ಬಿಜೆಪಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ಈ ಬಗ್ಗೆ ಹೋರಾಟ ನಡೆಸಿದೆ. ಸಾಮಾನ್ಯ ಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದೆ. ಆದರೆ ಆಡಳಿತಾರೂಢ ಪಕ್ಷದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು.
ಮೂರ್ನಾಲ್ಕು ತಿಂಗಳಿಗೊಮ್ಮೆ ಪಾಲಿಕೆ ಸಭೆ ನಡೆಯುತ್ತಿದೆ. ಚರ್ಚೆಗಳು ಸುದೀರ್ಘವಾಗಿ ರಾತ್ರಿವರೆಗೂ ಸಭೆ ನಡೆಯುತ್ತದೆ. ಆದರೆ ನಮ್ಮ ಪ್ರಶ್ನೆಗಳಿಗೆ ಆಡಳಿತ ಪಕ್ಷದಿಂದ ಸರಿಯಾದ ಉತ್ತರ ಬರುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯರಾದ ಬಿ.ಎ.ರಮೇಶ್ ಹೆಗ್ಡೆ, ಶಾಮೀರ್ ಖಾನ್, ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಮೆಹೆಕ್ ಷರೀಫ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಕಾಶಿ ಸುದ್ದಿಗೋಷ್ಠಿಯಲ್ಲಿದ್ದರು.