ಯೋಗದಿಂದ ಆರೋಗ್ಯಕರ ಜೀವನ

h1-Patanjali 2
Published on

ಹುಬ್ಬಳ್ಳಿ: ಕರೊನಾ ಸಂದರ್ಭವು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವ ಅವಶ್ಯಕತೆಯನ್ನು ಸಾರಿ ಹೇಳಿದೆ. ಯೋಗ, ಪ್ರಾಣಾಯಾಮಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು. ನಮ್ಮ ಮುಂದಿನ ಪೀಳಿಗೆಯ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಯೋಗ ಜೀವನ ನಡೆಸಬೇಕಾಗಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.

‘ಬೇಡ ಮದ್ಯಪಾನ - ಮಾಡು ಯೋಗ ಧ್ಯಾನ’ ಎಂಬ ವಿಶೇಷ ಸಂಕಲ್ಪದೊಂದಿಗೆ ಪತಂಜಲಿ ಯೋಗ ಪೀಠ ಸಮಿತಿ ಕರ್ನಾಟಕದ ವತಿಯಿಂದ ಯೋಗ ಶಿಕ್ಷಕರಿಗೆ ಆಯೋಜಿಸಲಾದ ತಿಂಗಳ ಅವಧಿಯ ಆನ್​ಲೈನ್ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಸಂಜೆ ಇಲ್ಲಿಯ ಕೇಶ್ವಾಪುರದ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

2007ರಲ್ಲಿ ಬಾಬಾ ರಾಮದೇವ ಅವರು ಹುಬ್ಬಳ್ಳಿಯಲ್ಲಿ ಯೋಗ ಶಿಬಿರ ಮಾಡಿದ ನಂತರ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆರಂಭವಾಯಿತು. ಲಕ್ಷಾಂತರ ಜನರು ಯೋಗದಲ್ಲಿ ತೊಡಗಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ಪ್ರಾಶಸ್ಱ ನೀಡಿದ್ದಾರೆ. ಅವರ ದೂರದೃಷ್ಟಿಯಿಂದಾಗಿ ಇಂದು ವಿಶ್ವ ಮಟ್ಟದಲ್ಲಿ ಯೋಗ ಬೆಳೆಯುತ್ತಿದೆ ಎಂದರು. ತರಬೇತಿ ಶಿಬಿರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿರುವುದು ಸಂತಸದ ಸಂಗತಿ ಎಂದು ಡಾ. ಸಂಕೇಶ್ವರ ಅವರು ಹೇಳಿದರು.

ಹುಬ್ಬಳ್ಳಿ ಸ್ಮರಿಸಿದ ಬಾಬಾ ರಾಮದೇವ: ಆನ್​ಲೈನ್ ಯೋಗ ತರಬೇತಿಗೆ ಶುಭ ಹಾರೈಸಿದ ಯೋಗಋಷಿ ಬಾಬಾ ರಾಮದೇವ ಅವರು, ಕರ್ನಾಟಕ ಭಾಗದಲ್ಲಿ ಯೋಗವನ್ನು ಜನಪ್ರಿಯಗೊಳಿಸುವಲ್ಲಿ ವಿಆರ್​ಎಲ್ ಸಂಸ್ಥೆಯ ಕೊಡುಗೆಯನ್ನು ಸ್ಮರಿಸಿದರು. ಡಾ. ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಅವರನ್ನು ಅಭಿನಂದಿಸಿದರು.

ಹರಿದ್ವಾರದ ಮುಖ್ಯ ಕೇಂದ್ರೀಯ ಪ್ರಭಾರಿ ಸಾಧಿ್ವ ದೇವಪ್ರಿಯ ಅವರು ಕನ್ನಡದಲ್ಲಿ ಮಾತನಾಡಿ, ದುಶ್ಚಟಕ್ಕೆ ಯಾರೂ ಬಲಿಯಾಗಬಾರದು. ಬೆಳಗ್ಗೆ ಒಂದು ಗಂಟೆ ಯೋಗ ಧ್ಯಾನ ಮಾಡಿದರೆ ದುಶ್ಚಟಗಳಿಂದ ದೂರ ಇರಬಹುದು ಎಂದರು.

ಬೀದರ ಸಂಸದ ಭಗವಂತ ಖೂಬಾ ಮಾತನಾಡಿ, ವ್ಯಕ್ತಿ, ಕುಟುಂಬ, ಸಮಾಜ, ದೇಶ, ಜಗತ್ತು ಹೀಗೆ ಎಲ್ಲರೂ ಸ್ವಸ್ಥ ಜೀವನ ನಡೆಸಬೇಕು ಎಂಬ ಆಶಯದೊಂದಿಗೆ ಪತಂಜಲಿ ಯೋಗ ಪೀಠ ಇಂಥ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದೆ ಎಂದು ಪ್ರಶಂಸಿಸಿ, ಶುಭ ಕೋರಿದರು.

ಪತಂಜಲಿ ಪೀಠದ ಕೇಂದ್ರೀಯ ಪ್ರಭಾರಿ ಡಾ. ಜಯದೀಪ ಆರ್ಯ ಮಾತನಾಡಿ, ವಿಆರ್​ಎಲ್ ಸೇವೆ ಸ್ಮರಿಸಿದರು. ಭವರಲಾಲ ಆರ್ಯ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಯೋಗ ಪಸರಿಸುತ್ತಿದೆ. ಕರೊನಾ ಇರಲಿ ಬಿಡಲಿ, ನಾವು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ನಿತ್ಯ ಯೋಗ ಮಾಡಬೇಕು. ಯೋಗಮಯ ಜೀವನ ರೂಢಿಸಿಕೊಂಡಾಗಲೇ ಬದುಕು ಸಫಲವಾಗುತ್ತದೆ ಎಂದರು. ಆನ್​ಲೈನ್ ತರಬೇತಿ ಸಂಘಟಕರು, ಪತಂಜಲಿ ಯೋಗಪೀಠ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ ಆರ್ಯ ಅವರು ಮಾತನಾಡಿ, ಬಾಬಾ ರಾಮದೇವ ಗುರೂಜಿ ಆಶೀರ್ವಾದದಿಂದ ಸತತ ಮೂರನೇ ಆನ್​ಲೈನ್ ಶಿಬಿರವನ್ನು ಈಗ ಸಂಘಟಿಸಲಾಗಿದೆ. ಪ್ರತಿದಿನ ಬೆಳಗ್ಗೆ 6ರಿಂದ 8 ಹಾಗೂ ಸಂಜೆ 7ರಿಂದ ರಾತ್ರಿ 8ರವರೆಗೆ ಶಿಬಿರ ನಡೆಯಲಿದೆ ಎಂದರು.

ಜನರಿಗೆ ಆರೋಗ್ಯ ಕೊಟ್ಟು ಹೊಸ ವರ್ಷ ಸ್ವಾಗತ ಮಾಡಬೇಕೆನ್ನುವುದು ನಮ್ಮ ಕಾರ್ಯಕರ್ತರ ಸಂಕಲ್ಪವಾಗಿದೆ. ಇದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಹಾಗೂ ದೇಶ ವಿದೇಶದಿಂದ ಸಾವಿರ ಜನ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.ಶಿಬಿರ ಉದ್ಘಾಟನೆಗೂ ಮುನ್ನ ವಿಧ್ಯುಕ್ತವಾಗಿ ಅಗ್ನಿಹೋತ್ರವನ್ನು ನೆರವೇರಿಸಲಾಯಿತು.

ಬಹಳಷ್ಟು ಬಾರಿ ಹುಬ್ಬಳ್ಳಿಗೆ ಬಂದಿದ್ದೇನೆ. ಯಾವುದೇ ಸ್ವಾರ್ಥ ಇಲ್ಲದೆ ಡಾ. ವಿಜಯ ಸಂಕೇಶ್ವರ ಹಾಗೂ ಅವರ ಪರಿವಾರದವರು ಯೋಗ ಶಿಬಿರಗಳನ್ನು ಸಂಘಟಿಸಿದ್ದಾರೆ. ಈ ಮೂಲಕ ಅವರು ಧರ್ಮ ಹಾಗೂ ದೇಶದ ಸೇವೆ ಮಾಡುತ್ತಿದ್ದಾರೆ. ಸಂಕೇಶ್ವರ ಅವರು ದಿವ್ಯ ಚಿಂತಕರೂ ಹೌದು. ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ರಾಜನೀತಿಯಲ್ಲಿದ್ದರೂ ರಾಜಧರ್ಮದೊಂದಿಗೆ ಬಾಳುತ್ತಿರುವ ಅವರು ಸಮಾಜಕ್ಕೆ ಆದರ್ಶಪ್ರಾಯರು. ಅವರು ನೂರ್ಕಾಲ ಬಾಳಲಿ.| ಬಾಬಾ ರಾಮದೇವ ಗುರೂಜಿಪತಂಜಲಿ ಯೋಗ ಪೀಠ ಅದ್ಭುತ ಕಾರ್ಯ ಮಾಡುತ್ತಿದೆ. ಕರೊನಾ ಸಂದರ್ಭದಲ್ಲಿ ಆನ್​ಲೈನ್ ಮೂಲಕ ತರಬೇತಿ ನೀಡುತ್ತಿರುವುದು ಒಳ್ಳೆಯ ಕೆಲಸ. ನಿತ್ಯ ಬೆಳಗ್ಗೆ ಒಂದು ಗಂಟೆ ಯೋಗ, ಧ್ಯಾನ ಮಾಡುವುದರಿಂದ ಯುವ ಪೀಳಿಗೆ ಎಂದೂ ನಶೆಯ ಬಲೆಗೆ ಬೀಳದಂತೆ ಬದುಕು ಕಟ್ಟಿಕೊಳ್ಳಬಹುದು.| ಭಗವಂತ ಖೂಬಾ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net